ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ- ಹೆಚ್‍ಡಿಕೆ ಭೇಟಿಯಾದ ಉಮೇಶ್ ಕತ್ತಿ?

ಬೆಂಗಳೂರು: ಬಿಜೆಪಿಯಲ್ಲಿ ಸಚಿವ ಸ್ಥಾನ ಸಿಗದವರು ಬಂಡಾಯದ ಬಾವುಟ ಹಾರಿಸುವ ಮುನ್ಸೂಚನೆ ಕೊಡುತ್ತಿದ್ದಾರೆ. ಇತ್ತೀಚೆಗೆ ಜಗದೀಶ್ ಶೆಟ್ಟರ್ ನಿವಾಸದಲ್ಲಿ ಹಲವು ಶಾಸಕರು ಸಭೆ ಮಾಡಿದ ಸುದ್ದಿ ಭಾರೀ ಸಂಚಲನ ಮೂಡಿಸಿತ್ತು. ಈಗ ಅಂತದ್ದೇ ದೊಡ್ಡ ಸಂಚಲನ ಬಿಜೆಪಿಯಲ್ಲಿ ಸೃಷ್ಟಿಯಾಗಿದ್ದು, ಸಚಿವ ಸ್ಥಾನ ಸಿಗದ ಹುಕ್ಕೇರಿ ಶಾಸಕ ಉಮೇಶ್ ಕತ್ತಿ ಮಾಜಿ ಸಿಎಂ, ಜೆಡಿಎಸ್ ನಾಯಕ ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿರೋದು ಭಾರೀ ಸಂಚಲನಕ್ಕೆ ಕಾರಣವಾಗಿದೆ.

ಮಂಗಳವಾರ ಸ್ವತಃ ಕುಮಾರಸ್ವಾಮಿ ಅವರ ನಿವಾಸಕ್ಕೆ ತೆರಳಿ ಉಮೇಶ್ ಕತ್ತಿ ಮಾತುಕತೆ ನಡೆಸಿದ್ದಾರೆ ಅಂತ ಜೆಡಿಎಸ್ ಮೂಲಗಳು ಹೇಳುತ್ತಿವೆ. ಸುಮಾರು 15 ನಿಮಿಷಗಳ ಕಾಲ ರಾಜಕೀಯ ಚರ್ಚೆಗಳ ಬಗ್ಗೆ ಇಬ್ಬರು ನಾಯಕರು ಮಾತಾಡಿದ್ದಾರೆ ಎನ್ನಲಾಗುತ್ತಿದೆ. ಉಮೇಶ್ ಕತ್ತಿ ಜೊತೆ ಸಚಿವ ಸ್ಥಾನದ ಆಕಾಂಕ್ಷಿಗಳಾದ ಮುರುಗೇಶ್ ನಿರಾಣಿ, ಗೂಳಿಹಟ್ಟಿ ಶೇಖರ್ ಕೂಡ ಇದ್ದರು ಎನ್ನಲಾಗುತ್ತಿದೆ.

ಉಮೇಶ್ ಕತ್ತಿಯ ಈ ನಡೆ ಬಿಜೆಪಿಯಲ್ಲಿ ಚರ್ಚೆಗೆ ಗ್ರಾಸವಾಗಿದೆ. ದಿಢೀರ್ ಅಂತ ಕುಮಾರಸ್ವಾಮಿ ಭೇಟಿ ಮಾಡಿರೋದು ಹಲವು ಅನುಮಾನಕ್ಕೆ ಕಾರಣವಾಗಿದೆ. ಕುಮಾರಸ್ವಾಮಿ ಭೇಟಿ ಮಾಡೋ ಮೂಲಕ ಸಚಿವ ಸ್ಥಾನಕ್ಕಾಗಿ ಬ್ಲ್ಯಾಕ್ ಮೇಲ್ ತಂತ್ರ ಅನುಸರಿಸುತ್ತಿದ್ದಾರಾ ಅನ್ನೋ ಅನುಮಾನ ಒಂದು ಕಡೆಯಾದ್ರೆ, ಬಂಡಾಯ ಬಿಜೆಪಿ ಶಾಸಕರ ಗುಂಪು ರಚನೆ ಮಾಡಿಕೊಂಡು ಸರ್ಕಾರದಿಂದ ಹೊರ ಬರುವ ಯತ್ನಗಳು ಮಾಡಬಹುದು ಎನ್ನಲಾಗ್ತಿದೆ. ಇದ್ಯಾವುದು ಆಗದೇ ಹೋದರೆ ಬಿಜೆಪಿ ತ್ಯಜಿಸಿ ಮತ್ತೆ ಜೆಡಿಎಸ್ ಸೇರುವ ಮೂಲಕ ಬಿಜೆಪಿಗೆ ಟಾಂಗ್ ಕೊಡೋ ಬಗ್ಗೆಯೂ ಚರ್ಚೆಗಳು ನಡೆದಿವೆ ಎನ್ನಲಾಗ್ತಿದೆ.

ಕುಮಾರಸ್ವಾಮಿ ಭೇಟಿ ಬಗ್ಗೆ ಸ್ವತಃ ಉಮೇಶ್ ಕತ್ತಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ್ದಾರೆ. ನಾನು ಆರು ತಿಂಗಳಿಂದ ಕುಮಾರಸ್ವಾಮಿಯವರನ್ನು ಭೇಟಿ ಮಾಡಿಲ್ಲ. ಒಂದು ವೇಳೆ ಭೇಟಿ ಮಾಡಿದ್ರು ತಪ್ಪೇನಿದೆ ಅಂದರು. ನನನ್ನು ಮಂತ್ರಿ ಮಾಡೋರು ಅವರಲ್ಲ. ಯಡಿಯೂರಪ್ಪ ನಮ್ಮನ್ನ ಮಂತ್ರಿ ಮಾಡೋರು. ಕುಮಾರಸ್ವಾಮಿ ಬಳಿ ನಾನ್ಯಾಕೆ ಹೋಗಲಿ ಅಂತ ಪ್ರಶ್ನೆ ಮಾಡಿದ್ರು. ಯಡಿಯೂರಪ್ಪ ನಮ್ಮ ನಾಯಕರು. ಅವರು ಸಚಿವ ಸ್ಥಾನ ಕೊಟ್ಟರೆ ನಿಭಾಯಿಸುತ್ತೇನೆ. ಇಲ್ಲದೇ ಇದ್ದರೆ ಶಾಸಕನಾಗಿಯೇ ಇರುತ್ತೇನೆ. ಯಾವುದೇ ಕಾರಣಕ್ಕೂ ಜೆಡಿಎಸ್ ಸೇರೊಲ್ಲ ಅಂತ ಸ್ಪಷ್ಟನೆ ನೀಡಿದ್ದಾರೆ.

Comments

Leave a Reply

Your email address will not be published. Required fields are marked *