ನೀನ್ ಯಾವ ಊರ ಲೀಡರ್ ಹೋಗಲೇ- ಗ್ರಾಮಸ್ಥರಿಗೆ ಎಂಎಲ್‍ಸಿ ತೇಜಸ್ವಿನಿ ಅವಾಜ್

ಚಿಕ್ಕಬಳ್ಳಾಪುರ: ಮಾಜಿ ಸಂಸದೆ ಹಾಗೂ ಹಾಲಿ ಎಂಎಲ್‍ಸಿ ತೇಜಸ್ವಿನಿ ರಮೇಶ್ ತಮ್ಮ ತವರೂರಿನ ಗ್ರಾಮಸ್ಥರ ಮೇಲೆಯೇ ದರ್ಪ ಮೆರೆದಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡರಾಯಪ್ಪನಹಳ್ಳಿ ಗ್ರಾಮದಲ್ಲಿ ನಡೆದಿದೆ.

ದೊಡ್ಡರಾಯಪ್ಪನಹಳ್ಳಿ ಗ್ರಾಮದ ತೇಜಸ್ವಿನಿ ರಮೇಶ್ ಕಳೆದ 6 ತಿಂಗಳಿಂದ ತವರೂರಿನಲ್ಲೇ ನೆಲೆಸಿದ್ದು, ಗ್ರಾಮದಲ್ಲಿ ಶಾಲೆಯೊಂದನ್ನ ನಿರ್ಮಾಣ ಮಾಡಲು ಮುಂದಾಗಿದ್ದಾರೆ ಎನ್ನಲಾಗಿದೆ. ಹೀಗಾಗಿ ಗ್ರಾಮ ಪಂಚಾಯ್ತಿ ವತಿಯಿಂದ ಗ್ರಾಮದಲ್ಲಿನ ದಲಿತರಿಗೆ ಸೇರಿದ ಜಾಗವನ್ನ ಮಂಜೂರು ಮಾಡಿಸಿಕೊಂಡು ಶಾಲೆಯ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಆದರೆ ಇದಕ್ಕೆ ಸರ್ಕಾರಿ ಅನುದಾನ ಒಂದು ಕೋಟಿ ರೂಪಾಯಿ ಬಳಸಿಕೊಂಡು ಶಾಲೆ ನಿರ್ಮಾಣ ಮಾಡುತ್ತಿರುವುದಾಗಿ ಗ್ರಾಮಸ್ಥರಿಗೆ ತೇಜಸ್ವಿನಿ ರಮೇಶ್ ತಿಳಿಸಿದ್ದಾರಂತೆ.

ಸದ್ಯ ಶಾಲೆಯ ಕಟ್ಟಡ ನಿರ್ಮಾಣ ಕಾಮಗಾರಿ ಆರಂಭಿಸಿರುವ ತೇಜಸ್ವಿನಿ ರಮೇಶ್, ಮಂಜೂರಾದ ಜಾಗದ ಜೊತೆಗೆ ದಲಿತರ ಕೇರಿಗೆ ಇದ್ದ ರಸ್ತೆಯನ್ನ ಸೇರಿಸಿ ಶಾಲಾ ಕಟ್ಟಡ ಕಟ್ಟಲು ಮುಂದಾಗಿದ್ದಾರಂತೆ. ಇದರಿಂದ ಅಸಮಾಧಾನಗೊಂಡಿರುವ ಗ್ರಾಮದ ಕೆಲವರು, ಇದು ನಮ್ಮದೇ ಜಾಗ ಆದರೆ ಶಾಲೆಯ ನಿರ್ಮಾಣಕ್ಕೆ ಅಂದಿದ್ದಕ್ಕೆ ಬಿಟ್ಟುಕೊಟ್ವಿ. ಈಗ ನಮಗೆ ಓಡಾಡೋಕೆ ಜಾಗ ಬಿಡದೆ ಶಾಲೆ ಕುಟ್ಟುತ್ತಿದ್ರೆ ಹೇಗೆ? ನಮ್ಮ ಜಾಗ ನಮಗೆ ಬಿಟ್ಟುಬಿಡಿ ಶಾಲೆ ಕಟ್ಟೋದು ಬೇಡ ಅಂತ ವಾಗ್ವಾದ ನಡೆಸಿದ್ದಾರೆ.

ಈ ವೇಳೆ ಕೆಲ ಗ್ರಾಮಸ್ಥರು ಗ್ರಾಮದಲ್ಲಿ ಶಾಲೆ ನಿರ್ಮಾಣವಾಗಲಿ ಅಂತ ಎಂಎಲ್‍ಸಿ ತೇಜಸ್ವಿನಿ ರಮೇಶ್ ಪರ ಮಾತನಾಡಿದ್ರೇ, ಇನ್ನೂ ಕೆಲವರು ನಮಗೆ ಓಡಾಡೋಕೆ ರಸ್ತೆ ಇಲ್ಲವಾದರೆ ಹೇಗೆ ಅಂತ ಪ್ರಶ್ನೆ ಮಾಡಿದ್ದಾರೆ. ಈ ವೇಳೆ ತೇಜಸ್ವಿನಿ ರಮೇಶ್, ಕಾಮಗಾರಿಗೆ ಅಡ್ಡಿಪಡಸಲು ಮುಂದಾದ ಮೂವರ ಮೇಲೆ ಹಲ್ಲೆಗೆ ಯತ್ನಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿರುವ ವಿಡಿಯೋ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

ಈ ಬಗ್ಗೆ ಸುದ್ದಿ ಪ್ರಸಾರ ಮಾಡಿದ ಪಬ್ಲಿಕ್ ಟಿವಿ, ಎಂಎಲ್‍ಸಿ ತೇಜಸ್ವಿನಿ ರಮೇಶ್ ರವರಿಗೆ ಕರೆ ಮಾಡಿದ್ರೆ ಕರೆ ಸ್ವೀಕರಿಸಿಲ್ಲ. ಸದ್ಯ ತೇಜಸ್ವಿನಿ ರಮೇಶ್ ವಿರುದ್ಧ ತಮ್ಮದೇ ತವರೂರಿನ ಕೆಲ ಗ್ರಾಮಸ್ಥರು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

Comments

Leave a Reply

Your email address will not be published. Required fields are marked *