ಕಾಂಗ್ರೆಸ್ಸಿಗರು ಪೊಲೀಸರ ವಾಹನದಲ್ಲಿ ಹಣ, ಹೆಂಡ ಇಟ್ಟುಕೊಂಡು ಹೋಗ್ತಾರೆ: ಪಿ.ರಾಜು

ಯಾದಗಿರಿ: ಚುನಾವಣೆ ವೇಳೆ ಕಾಂಗ್ರೆಸ್ ನಾಯಕರು ಪೊಲೀಸರ ವಾಹನದಲ್ಲಿ ಹಣ, ಹೆಂಡ ಇಟ್ಟುಕೊಂಡು ಹೋಗುತ್ತಾರೆ ಎಂದು ಬಿಜೆಪಿ ಶಾಸಕ ಪಿ.ರಾಜು ಆರೋಪಿಸಿದ್ದಾರೆ.

ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಶಾಸಕರು, ನಾನು ಪೊಲೀಸ್ ಆಗಿ ಕೆಲಸ ಮಾಡಿದ್ದವನು. ನೀವು ಪೊಲೀಸ್ ಜೀಪ್‍ನಲ್ಲಿ ಹಣ ಸಾಗಿಸುತ್ತೀರಿ. ಈ ಸಂಬಂಧ ಸೂಕ್ತ ದಾಖಲೆ ಸಿಕ್ಕರೆ ಆರು ಗಂಟೆಯಲ್ಲೇ ಹಣ ಸೀಜ್ ಮಾಡಿಸುತ್ತೇನೆ. ಇಲ್ಲವೆಂದರೆ ರಾಜಕೀಯ ಬಿಡುತ್ತೇನೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಗುಡುಗಿದರು.

ರಾಜ್ಯದಲ್ಲಿ ಬರ ತಾಂಡವಾಡುತ್ತಿದ್ದಾಗ ಸಿಎಂ ಕುಮಾರಸ್ವಾಮಿ ಅವರು ರೆಸಾರ್ಟಿನಲ್ಲಿದ್ದರು. ಅಲ್ಲಿಂದ ನಿನ್ನೆ ಹೊರಗೆ ಬಂದು ಕಲಬುರಗಿ ಬಿಸಿಲು ನೋಡುತ್ತಿದ್ದಾರೆ. ನೀವು ಯಾವ ಮುಖ ಇಟ್ಟುಕೊಂಡು ಮತಯಾಚನೆ ಮಾಡುತ್ತೀರಿ ಎಂದು ಸಿಎಂಗೆ ಪ್ರಶ್ನಿಸಿದರು.

ಉಮೇಶ್ ಜಾಧವ್ ಅವರು ಕಾಂಗ್ರೆಸ್ ಬಿಟ್ಟ ಮೇಲೆ ಮಲ್ಲಿಕಾರ್ಜುನ ಖರ್ಗೆಯವರ ಕೋಟೆ ಬಿರುಕು ಬಿಟ್ಟಿದೆ. ಲೋಕಸಭಾ ಚುನಾವಣೆ ಫಲಿತಾಂಶ ಮೇ 23ರಂದು ಹೊರಬೀಳಲಿದ್ದು, ಅಂದೇ ಖರ್ಗೆಯವರ ಕೋಟೆ ಒಡೆಯಲಿದೆ. ರೆಸಾರ್ಟ್ ರಾಜಕೀಯ ಮಾಡುವ ಸಿಎಂ ಕುಮಾರಸ್ವಾಮಿ ಅವರ ಅಪವಿತ್ರ ಮೈತ್ರಿ ಯಾವಾಗ ಮುರಿಯುತ್ತದೆಯೋ ಅಂತ ಕಾಯುತ್ತಿದ್ದೇನೆ ಎಂದು ಹೇಳಿದರು.

ಮಲ್ಲಿಕಾರ್ಜುನ ಖರ್ಗೆ ಅವರ ಪರವಾದ ಪೊಲೀಸ್ ಮತ್ತು ಚುನಾವಣೆ ಅಧಿಕಾರಿಗಳೇ ಎಂದು ಮಾತು ಆರಂಭಿಸಿದ ಶಾಸಕ ರಾಜು ಅವರು, ಅಧಿಕಾರಿಗಳನ್ನು ಇಟ್ಟುಕೊಂಡು ರಾಜಕೀಯ ಮಾಡುತ್ತಾರೆ. ಬಡವರ ರಕ್ಷಣೆ ಮಾಡಿ ಅಂತ ಹೇಳಿದರೆ ರಾಷ್ಟ್ರ ಲಾಂಚನವನ್ನು ತಲೆ ಮೇಲೆ ಇಟ್ಟುಕೊಂಡು ಖರ್ಗೆಯವರ ಕಾಲಿಗೆ ಮುಗಿಯುತ್ತಾರೆ. ನನ್ನ ಸೌಂಡ್ ಬಾಕ್ಸಿಗೆ ಖರ್ಗೆ ಕುಟುಂಬ ನಡುಗಿದೆ. ಅನುಮತಿ ಪಡೆದು ವಾಹನ ಬಳಕೆ ಮಾಡಿದರೂ ನರಸತ್ತ ಅಧಿಕಾರಿಗಳು ನನ್ನ ಗಾಡಿ ಪರಿಶೀಲನೆ ಮಾಡುತ್ತಾರೆ ಎಂದು ಎಸ್‍ಪಿ ಶಶಿಕುಮಾರ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.

Comments

Leave a Reply

Your email address will not be published. Required fields are marked *