ಕಾಂಗ್ರೆಸ್‍ನವರಿಗೆ ಹೋರಾಟ ಮಾಡಲು ಬರಲ್ಲ, ಬೇಕಾದ್ರೆ ಟ್ರೈನಿಂಗ್ ಕೊಡ್ತೀನಿ ಬನ್ನಿ: ರೇಣುಕಾಚಾರ್ಯ

-ಕಾಂಗ್ರೆಸ್, ಜೆಡಿಎಸ್ ಕುಚು-ಕುಚು ಮಾಡಿ ಅಧಿಕಾರಕ್ಕೆ ಬಂದಿತ್ತು

ದಾವಣಗೆರೆ: ಕಾಂಗ್ರೆಸ್‍ನವರ ಹೋರಾಟ ಎಂದರೆ ಬಾಡೂಟ. 500 ರೂ. ಕೊಟ್ಟು ಜನರನ್ನು ಕರೆತಂದು ಹೋರಾಟ ಮಾಡುತ್ತಾರೆ. ಕಾಂಗ್ರೆಸ್‍ನವರಿಗೆ ಹೋರಾಟ ಮಾಡಲು ಬರಲ್ಲ. ನನ್ನ ಬಳಿ ಬಂದ್ರೆ ಟ್ರೈನಿಂಗ್ ಕೊಡುತ್ತೇನೆ ಎಂದು ಕೈ ನಾಯಕರ ಪ್ರತಿಭಟನೆಯನ್ನು ಬಿಜೆಪಿ ಶಾಸಕ ರೇಣುಕಾಚಾರ್ಯ ಅಣಕಿಸಿದ್ದಾರೆ.

ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕರು, ದೇಶ ಹಾಗೂ ರಾಜ್ಯದಲ್ಲಿ ಬಿಜೆಪಿ ಹೋರಾಟ ಮೂಲಕ ಅಧಿಕಾರಕ್ಕೆ ಬಂದಿದೆ. ನಮ್ಮ ಕಾರ್ಯಕರ್ತರು ಪ್ರಾಮಾಣಿಕವಾಗಿ ಹೋರಾಟದಲ್ಲಿ ಭಾಗವಹಿಸುತ್ತಾರೆ. ಬಿಜೆಪಿ ಹೋರಾಟದಲ್ಲಿ ಶಿಸ್ತು ಇದೆ ಎಂದು ಹೇಳಿದರು.

ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಬಗ್ಗೆ ನಮಗೂ ಅನುಕಂಪ ಇದೆ. ಡಿಕೆಶಿ ಎಲ್ಲಿ ಪಕ್ಷದ ಅಧ್ಯಕ್ಷರಾಗ್ತಾರೆ ಎಂದು ಕಾಂಗ್ರೆಸ್ ನಾಯಕರೇ ಅವರನ್ನು ಪ್ರಕರಣದಲ್ಲಿ ಸಿಲುಕಿಸಿದ್ದಾರೆ. ಡಿಕೆಶಿ ಬಂಧನವನ್ನು ಜಾತಿ ರಾಜಕಾರಣ ಮಾಡಬಾರದು. ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದೆ ಎಂಬ ಕಾಂಗ್ರೆಸ್ ನಾಯಕರ ಆರೋಪ ಸುಳ್ಳು. ಸುಖಾಸುಮ್ಮನೆ ಕಾಂಗ್ರೆಸ್ ಈ ರೀತಿ ಆರೋಪ ಮಾಡಬಾರದು ಎಂದು ಕಿಡಿ ಕಾರಿದರು.

ಬಿಜೆಪಿಯವರ ಕುತಂತ್ರದಿಂದ ವಿಚಾರಣೆಗೆ ಒಳಗಾಗಿದ್ದೇವೆ ಎಂಬ ಲಕ್ಷ್ಮಿ ಹೆಬ್ಬಾಳ್ಕರ್ ಮಾತು ಸುಳ್ಳು. ಸೋದರಿ ಲಕ್ಷ್ಮಿ ಅವರನ್ನು ಪಕ್ಷದಲ್ಲಿಯೇ ತುಳಿಯಲಾಗುತ್ತಿದೆ. ಲೋಕಸಭಾ ಚುನಾವಣೆ ಸೋತ ನಂತರ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಹೋರಾಟ ಮಾಡಿದ್ದು ಗೊತ್ತಿದೆ. ಕಾಂಗ್ರೆಸ್ ಮಹಿಳಾ ಅಧ್ಯಕ್ಷ ಸ್ಥಾನದಿಂದ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಇಳಿಸಿದರು. ಕಾಂಗ್ರೆಸ್ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಷಡ್ಯಂತ್ರ ನಡೆಸುವ ಕೆಲಸ ಮಾಡುತ್ತಿದೆ ಎಂದು ಬಾಂಬ್ ಸಿಡಿಸಿದರು.

ಕಾಂಗ್ರೆಸ್ ಮತ್ತು ಜೆಡಿಎಸ್ ಕುಚು ಕುಚು ಮಾಡಿ ಅಧಿಕಾರಕ್ಕೆ ಬಂದಿತ್ತು. ಆದ್ರೆ ಬಿಜೆಪಿ ಸ್ವತಂತ್ರವಾಗಿ ಅಧಿಕಾರಕ್ಕೆ ಬಂದು ಸರ್ಕಾರ ರಚನೆ ಮಾಡಿದೆ. ಕಾಂಗ್ರೆಸ್-ಜೆಡಿಎಸ್ ನಾಯಕರು ಬೇಕಾದಾಗ ಅಪ್ಪಿಕೊಳ್ಳುತ್ತಾರೆ. ಬೇಡವೆಂದಾಗ ದೂರವಾಗುತ್ತಾರೆ ಎಂದು ವ್ಯಂಗ್ಯವಾಡಿದರು.

Comments

Leave a Reply

Your email address will not be published. Required fields are marked *