ಡಿಕೆಶಿಯವರನ್ನು ಕಾಂಗ್ರೆಸ್ಸಿನವ್ರೇ ಬಲಿ ಕೊಟ್ಟರು: ರೇಣುಕಾಚಾರ್ಯ

ದಾವಣಗೆರೆ: ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಕಾಂಗ್ರೆಸ್ಸಿನವರೇ ಬಲಿಕೊಟ್ಟಿದ್ದಾರೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‍ನವರೇ ಡಿ.ಕೆ.ಶಿವಕುಮಾರ್ ಅವರನ್ನು ಮಾರಿ ಮುಂದೆ ಕೋಣ ಕಡಿಯುವ ರೀತಿಯಲ್ಲಿ ಕಡಿಯುತ್ತಾರೆ ಎಂದು ಕುಂದಗೋಳ ಚುನಾವಣೆ ಪ್ರಚಾರದ ವೇಳೆ ಹೇಳಿದ್ದೆ. ಅಷ್ಟೇ ಅಲ್ಲದೆ ಮೈತ್ರಿ ಸರ್ಕಾರ ಪತನಗೊಳ್ಳುತ್ತದೆ ಎಂದೂ ತಿಳಿಸಿದ್ದೆ. ಆಗ ಕೆಲವರು ನನ್ನ ಬಗ್ಗೆ ಅಪಹಾಸ್ಯ ಮಾಡಿದ್ದರು. ಆದರೆ ಆ ಮಾತುಗಳು ಈಗ ಸತ್ಯವಾಗಿವೆ ಎಂದು ಹೇಳಿದರು.

ಕಾಂಗ್ರೆಸ್ಸಿನಲ್ಲಿ ಇರುವ ಉತ್ತಮ ನಾಯಕನೆಂದರೆ ಡಿ.ಕೆ.ಶಿವಕುಮಾರ್. ಅವರು ಪಕ್ಷದಲ್ಲಿ ಬೆಳೆಯುತ್ತಾರೆ ಎಂದು ಅವರನ್ನು ತುಳಿಯುವ ಕೆಲಸ ನಡೆದಿದೆ. ಮಾಜಿ ಸಚಿವರು ಜೈಲಿಗೆ ಹೋಗಲು ಬಿಜೆಪಿ ಕಾರಣವಲ್ಲ. ಡಿಕೆ ಶಿವಕುಮಾರ್ ಅವರು ಜೈಲಿಗೆ ಹೋದಾಗ ಪಟಾಕಿ ಸಿಡಿದಿದ್ದು, ಸಿಹಿ ಹಂಚಿದ್ದು ಕಾಂಗ್ರೆಸ್ಸಿನವರು ಎಂದರು.

ಮಾಜಿ ಸಿಎಂಗಳಾದ ಎಚ್.ಡಿ.ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಅವರು ಹತಾಶರಾಗಿ ಸರ್ಕಾರ ನಾಲ್ಕು ತಿಂಗಳಲ್ಲಿ ಬೀಳುತ್ತದೆ ಅಂತ ಹೇಳುತ್ತಿದ್ದಾರೆ. ಆದರೆ ಸಿಎಂ ಬಿಎಸ್ ಯಡಿಯೂರಪ್ಪನವರ ನೇತೃತ್ವದಲ್ಲಿ ಬಿಜೆಪಿ ಪೂರ್ಣಾವಧಿ ಮುಗಿಸಲಿದೆ. ಅಷ್ಟೇ ಅಲ್ಲದೆ 2023ರ ಚುನಾವಣೆ ಬಹುಮತ ಪಡೆದು ಮತ್ತೆ ಅಧಿಕಾರ ಹಿಡಿಯುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅನ್ನಭಾಗ್ಯ, ಕೃಷಿ ಭಾಗ್ಯ ಯೋಜನೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ. ಹೀಗಾಗಿ ಈ ಕುರಿತು ತನಿಖೆಗೆ ಸಿಎಂ ಯಡಿಯೂರಪ್ಪ ಆದೇಶಿಸಿದ್ದಾರೆ. ಸಂಸದ ಅನಂತ್ ಕುಮಾರ್ ಹೆಗ್ಡೆ ಅವರು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದ ಸಸಿಕಾಂತ್ ಸೇಂಥಿಲ್ ಅವರ ಬಗ್ಗೆ ಏನು ಹೇಳಿದ್ದಾರೆ ಎಂಬುದು ಗೊತ್ತಿಲ್ಲ ಎಂದರು.

Comments

Leave a Reply

Your email address will not be published. Required fields are marked *