ಕರುಣೆ ಇಲ್ವಾ? ಹೆಣ್ಣುಮಕ್ಕಳ ಶಾಪ ಒಳ್ಳೆಯದಲ್ಲ- 3 ಪುಟಗಳ ಪತ್ರ ಬರೆದು ಬಿಎಸ್‍ವೈರನ್ನ ಪ್ರಶ್ನಿಸಿದ ವಿನಯ್ ಪತ್ನಿ ಶೋಭಾ

ಬೆಂಗಳೂರು: ಬಿಜೆಪಿ ಮಾಧ್ಯಮ ಸಹಸಂಚಾಲಕ ವಿನಯ್ ಅವರ ಪತ್ನಿ ಶೋಭಾ 3 ಪುಟಗಳ ಪತ್ರ ಬರೆದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪರನ್ನು ಪ್ರಶ್ನೆ ಮಾಡಿದ್ದಾರೆ.

ಯಡಿಯೂರಪ್ಪನವರೇ ಕರುಣೆ ಇಲ್ವಾ? ಹೆಣ್ಣು ಮಕ್ಕಳ ಶಾಪ ಒಳ್ಳೆಯದಲ್ಲ. ನಿಮಗೂ ಇಬ್ಬರು ಹೆಣ್ಣು ಮಕ್ಕಳಿದ್ದಾರೆ, ಸೊಸೆಯರಿದ್ದಾರೆ. ಅವರಿಗೂ ಹೀಗೆ ಆದರೆ ಸುಮ್ಮನಿರುತ್ತೀರಾ? ನನ್ನ ಜಾಗದಲ್ಲಿ ನಿಮ್ಮ ಮನೆ ಹೆಣ್ಣು ಮಕ್ಕಳಿದ್ದಿದ್ದರೆ ಏನು ಮಾಡುತ್ತಿದ್ರಿ, ಉತ್ತರ ಕೊಡಿ? ಎಂದು ಶೋಭಾ ಕೋಪದಿಂದ ಕೇಳಿದ್ದಾರೆ.

ನನ್ನ ಗಂಡನ ಸ್ನೇಹ ಬೆಳೆಸಿ ಸಂತೋಷ್ ರಾಜಕೀಯವಾಗಿ ಬೆಳೆದರು. ನಮ್ಮ ಮನೆಯಲ್ಲೇ ಅನ್ನ ತಿಂದು ನನ್ನ ಗಂಡನ ಕೊಲೆಗೆ ಪ್ರಯತ್ನಿಸಿದರು. ಅನ್ನ ಹಾಕಿದ ಮನೆಗೆ ಕನ್ನ ಹಾಕಿದವರ ಪರವಾಗಿ ನಿಂತಿದ್ದೀರ ನೀವು. ಸಂತೋಷನನ್ನು ಪೊಲೀಸರು ಹಿಡಿಯಲು ಬಂದಾಗ ತಪ್ಪಿಸಿಕೊಳ್ಳಲು ಸಹಾಯ ಮಾಡಿ ಬೇಲ್ ಕೊಡಿಸಿದ್ದೀರಿ. ಇದೇನಾ ನೀವು ಕಾನೂನಿಗೆ ಕೊಡುವ ಗೌರವ? ಏನೂ ತಪ್ಪು ಮಾಡದ ನನ್ನ ಗಂಡನನ್ನ ನೀವು, ನಿಮ್ಮ ಪಕ್ಷ ನಡೆಸಿಕೊಳ್ಳುತ್ತಿರುವ ರೀತಿ ಸರಿಯಲ್ಲ. ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಹಚ್ಚುತ್ತಿದ್ದೀರಾ. ನಿಮ್ಮ ಹೋರಾಟ ಪ್ರಾಮಾಣಿಕ ಹೋರಾಟವಾಗಿರಬೇಕೆ ಹೊರತು ರಾಜಕೀಯ ಹೋರಾಟವಾಗಿರಬಾರದು ಎಂದು ಹೇಳಿದ್ದಾರೆ.

ನಿಮ್ಮ ಹತ್ರ ಅಧಿಕಾರವಿದೆ, ಹಣಬಲವಿದೆ. ಆದರೆ ನಾವು ಬಡವರು. ನೀವು ಕೋರ್ಟ್, ಕಚೇರಿಗೆ ದಿನ ಅಲೆದಾಡಿ ಅಭ್ಯಾಸ ಇದೆ. ಆದರೆ ನಮ್ಮ ಪ್ರಮಾಣಿಕತೆಗೆ ನ್ಯಾಯ ಸಿಕ್ಕೆ ಸಿಗುತ್ತದೆ. ಹೋರಾಡುವ ಹಾಗಿದ್ರೆ ಮುಂದೆಯಿಂದ ಹೋರಾಡಿ, ಪ್ರಾಣ ತೆಗೆಯೋ ಕೆಲಸ ಮಾಡಬೇಡಿ. ಇಂದಿನಿಂದ ಯಾವುದಕ್ಕೂ ಹೆದರಲ್ಲ. ಒಳ್ಳೆಯದು, ಕೆಟ್ಟದನ್ನ ಆ ದೇವರು ನೋಡಿಕೊಳ್ಳುತ್ತಾನೆ ಎಂದು ಶೋಭಾ ಆಕ್ರೋಶದಿಂದ ಪತ್ರದಲ್ಲಿ ಬರೆದಿದ್ದಾರೆ.

ಇಲ್ಲಿವರೆಗೂ ನಿಮ್ಮ ಬಗ್ಗೆ ರಾಜ್ಯದ ಹೆಣ್ಣುಮಕ್ಕಳಿಗೆ ತಿಳಿದಿರಲಿಲ್ಲ. ಆದರೆ ಇನ್ನು ಮುಂದೇ ನಿಮ್ಮ ಬಗ್ಗೆ ತಿಳಿಯುತ್ತದೆ. ನನ್ನ ಗಂಡನ ಪ್ರಮಾಣಿಕ ಹೋರಾಟದ ಬೆಂಬಲಕ್ಕೆ ನಿಮ್ಮ ಪಕ್ಷದಿಂದ ಯಾರೂ ಬರಲಿಲ್ಲ ಎಂದು ಹೇಳಿದ್ದಾರೆ.

 

 

 

Comments

Leave a Reply

Your email address will not be published. Required fields are marked *