ಆ ಬಣ ಈ ಬಣ ಎನ್ನದೇ ಒಗ್ಗಟ್ಟು ಪ್ರದರ್ಶಿಸಿದ ಬಿಜೆಪಿ ನಾಯಕರು

ಬೆಂಗಳೂರು: ಸುವರ್ಣಸೌಧದಿಂದ ಸಿ.ಟಿ.ರವಿ (CT Ravi) ಆರೆಸ್ಟ್ ಆದ ಬಳಿಕ ಬಿಜೆಪಿ (BJP) ಒಗ್ಗಟ್ಟು ಪ್ರದರ್ಶಿಸಿದೆ. ಮಾಧ್ಯಮಗಳ ಮುಂದೆ ಆರೋಪ, ಪ್ರತ್ಯಾರೋಪದಲ್ಲಿ ತೊಡಗಿದ್ದ ಬಿಜೆಪಿಯ ದೊಡ್ಡ ನಾಯಕರು ಎಲ್ಲರೂ ಸಿಟಿ ರವಿ ರಕ್ಷಣೆ ನಿಂತಿದ್ದರು.

ಶುಕ್ರವಾರವೇ ವಿಧಾನ ಸೌಧದಲ್ಲಿ ಬೆಲ್ಲದ್‌ ಮತ್ತು ಯತ್ನಾಳ್‌ ಪೊಲೀಸ್‌ ವ್ಯಾನ್‌ ತಡೆದಿದ್ದರು. ನಂತರ ಖಾನಾಪುರ ಪೊಲೀಸ್ ಠಾಣೆಗೆ ಬಿಜೆಪಿ ನಾಯಕರು ತೆರಳಿದ್ದರು. ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ ನೇತೃತ್ವದಲ್ಲಿ ಒಗ್ಗಟ್ಟು ಪ್ರದರ್ಶನವಾಗಿತ್ತು. ಬೆಂಗಳೂರಿನಿಂದ ವಿಮಾನವೇರಿ ಬಿ.ವೈ ವಿಜಯೇಂದ್ರ ಬೆಳಗಾವಿಗೆ ಬದಿದ್ದರು. ಈ ಬಣ ಎನ್ನದೇ ಪಕ್ಷದೊಳಗಿನ ಅಸಮಾಧಾನ ಕಿತ್ತೆಸೆದು ಹೋರಾಟ ನಡೆಸಿದ್ದರು. ಇದನ್ನೂ ಓದಿ: ಹತ್ಯೆ ಮಾಡಲೆಂದು ಕಬ್ಬಿನ ಗದ್ದೆಗೆ ಕರ್ಕೊಂಡು ಬಂದಿದ್ರು: ರಾತ್ರಿ ಏನೇನಾಯ್ತು ವಿವರಿಸಿದ ಸಿಟಿ ರವಿ

 

ಪಬ್ಲಿಕ್‌ ಟಿವಿಯ ವಿಶೇಷ ಸಂದರ್ಶನಲ್ಲಿ ಬಿಜೆಪಿ ನಾಯಕರ ನಡುವಿನ ಒಗ್ಗಟ್ಟಿನ ಬಗ್ಗೆ ಸಿಟಿ ರವಿ ಪ್ರತಿಕ್ರಿಯಿಸಿ, ರಾಷ್ಟ್ರ, ಸಿದ್ಧಾಂತದ ವಿಚಾರ ಬಂದಾಗ ಬಿಜೆಪಿ ನಾಯಕರು ತಮ್ಮ ವೈಯಕ್ತಿಕ ಹಿತಾಸಕ್ತಿ ಮರೆತು ಒಂದಾಗುತ್ತಾರೆ. ಮಾಜಿ ಸಿಎಂ ಯಡಿಯರೂಪ್ಪ ಅವರು ಕರೆ ಮಾಡಿದ್ದರು. ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಜೆಪಿ ನಡ್ಡಾ, ಗೃಹ ಸಚಿವ ಅಮಿತ್‌ ಶಾ, ಬಿಎಲ್‌ ಸಂತೋಷ್ ಮಾತನಾಡಿದರು. ವಿಜಯೇಂದ್ರ ಅವರು ಮೊದಲ ವಿಮಾನ ಹತ್ತಿ ಬೆಳಗಾವಿಗೆ ಬಂದಿದ್ದರು. ಚೆಕ್‌ ಇನ್‌ ಆಗಿದ್ದ ವಿರೋಧ ಪಕ್ಷದ ನಾಯಕರಾದ ಅಶೋಕ್‌, ಛಲವಾದಿ ನಾರಾಯಣ ಸ್ವಾಮಿ ವಿಷಯ ತಿಳಿದು ವಿಮಾನ ನಿಲ್ದಾಣದಿಂದ ಮರಳಿದರು ಎಂದು ತಿಳಿಸಿದರು.

 

ಬಸನ ಗೌಡ ಪಾಟೀಲ್‌ ಯತ್ನಾಳ್‌ ವಿಷಯ ತಿಳಿದು ದಾರಿ ಮಧ್ಯದಿಂದ ರಿಟರ್ನ್‌ ಆದರು. ಅರವಿಂದ್‌ ಬೆಲ್ಲದ್‌ ನಮ್ಮ ಜೊತೆಗೆ ಇದ್ದರು. ಅಭಯ್‌ ಪಾಟೀಲ್‌ ವಕೀಲರ ಸಮೂಹವನ್ನೇ ಸಿದ್ಧಮಾಡಿದ್ದರು. ನನ್ನ ಪರವಾಗಿ ಹೈಕೋರ್ಟ್‌ ಮತ್ತು ಸೆಷನ್‌ ಕೋರ್ಟ್‌ನಲ್ಲಿ ಅರ್ಜಿ ಸಹ ಸಲ್ಲಿಕೆಯಾಗಿತ್ತು. ಇದೆಲ್ಲ ಪೂರ್ವ ಜನ್ಮದ ಪುಣ್ಯ ಎಂದು ಹೇಳಿದರು.