ಸಿ.ಟಿ.ರವಿ ಪ್ರಕರಣದಲ್ಲಿ ಸರ್ಕಾರದ ನಡೆ ಖಂಡನೀಯ – ರಾಜ್ಯಪಾಲರ ಮಧ್ಯಪ್ರವೇಶಕ್ಕೆ ಬಿಜೆಪಿ ಮನವಿ

ಬೆಂಗಳೂರು: ಎಂಎಲ್‌ಸಿ ಸಿ.ಟಿ.ರವಿ (C.T.Ravi) ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ಮಧ್ಯಪ್ರವೇಶಿಸಬೇಕು ಎಂದು ಬಿಜೆಪಿ (BJP) ನಿಯೋಗ ಮನವಿ ಮಾಡಿಕೊಂಡಿದೆ.

ಸಿ.ಟಿ.ರವಿ ಬಂಧನ ಪ್ರಕರಣದಲ್ಲಿ ಸತ್ಯ ಶೋಧನೆ ನಡೆಸಲು ರಾಜ್ಯಪಾಲರಾದ ಥಾವರ್‌ಚಂದ್‌ ಗೆಹ್ಲೋಟ್‌ ಅವರಿಗೆ ಬಿಜೆಪಿ ನಿಯೋಗ ದೂರು ನೀಡಿದೆ. ಇದನ್ನೂ ಓದಿ: ಸಿ.ಟಿ.ರವಿ ಕೇಸ್ ಸಿಬಿಐಗೆ ಒಪ್ಪಿಸಿ: ಆರ್.ಅಶೋಕ್ ಆಗ್ರಹ

ಬಿಜೆಪಿ ಎಂಎಲ್‌ಸಿ ವಿಚಾರದಲ್ಲಿ ರಾಜ್ಯ ಸರ್ಕಾರದ ನಡೆ ಖಂಡನೀಯ. ಸಾಂವಿಧಾನಿಕ ಹಾಗೂ ಕಾನೂನು ಉಲ್ಲಂಘನೆ ಆಗಿದೆ. ಪೊಲೀಸ್ ಇಲಾಖೆ ಮೂಲಕ ಅಧಿಕಾರ ದುರ್ಬಳಕೆ ಆಗಿದೆ. ರಾಜ್ಯಪಾಲರು ಕೂಡಲೇ ಮಧ್ಯಪ್ರವೇಶ ಮಾಡಿ ಬಂಧನ ಪ್ರಕರಣದಲ್ಲಿ ಸತ್ಯ ಶೋಧನೆ ನಡೆಸಬೇಕು ಎಂದು ಮನವಿ ಸಲ್ಲಿಸಿದೆ.

ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ ವಿರುದ್ಧ ಸದನದಲ್ಲಿ ಆಕ್ಷೇಪಾರ್ಹ ಪದ ಬಳಕೆ ಆರೋಪದಲ್ಲಿ ಸಿ.ಟಿ.ರವಿ ಅವರನ್ನು ಪೊಲೀಸರು ಬಂಧಿಸಿದ್ದರು. ಬಂಧನದ ದಿನ ರಾತ್ರಿ ನಾಟಕೀಯ ಬೆಳವಣಿಗೆಗಳು ನಡೆದವು ಎಂದು ಪೊಲೀಸರ ವಿರುದ್ಧ ಸಿ.ಟಿ.ರವಿ ಆಕ್ರೋಶ ಹೊರಹಾಕಿದ್ದರು. ಇದನ್ನೂ ಓದಿ: 4 ಜಿಲ್ಲೆ, 50ಕ್ಕೂ ಹೆಚ್ಚು ಗ್ರಾಮ, 14 ಗಂಟೆ ಅಲೆದಾಡಿಸಿದ್ರು.. ಪೊಲೀಸರು ದೌರ್ಜನ್ಯ ಎಸಗಿದ್ರು: ನೋವು ಹೇಳಿಕೊಂಡ ಸಿ.ಟಿ.ರವಿ

ಸರ್ಕಾರದ ಆಣತಿಯಂತೆ ಪೊಲೀಸರು ನಡೆದುಕೊಂಡಿದ್ದಾರೆ. ನನಗೆ ದೈಹಿಕ, ಮಾನಸಿಕ ಹಿಂಸೆ ನೀಡಿದ್ದಾರೆ. ಎಂದು ಸಿ.ಟಿ.ರವಿ ಆರೋಪಿಸಿದ್ದರು. ಪಕ್ಷದ ನಾಯಕನ ಕೊಲೆಗೆ ಸಂಚು ನಡೆದಿತ್ತು ಎಂದು ಬಿಜೆಪಿ ಹಿರಿಯ ನಾಯಕರು ಗಂಭೀರ ಆರೋಪ ಮಾಡಿದ್ದರು. ಇದನ್ನೂ ಓದಿ: ದಾವಣಗೆರೆಯಲ್ಲಿ ಸಿ.ಟಿ.ರವಿ ಬಿಡುಗಡೆ – ಬಿಜೆಪಿ ಕಾರ್ಯಕರ್ತರಿಂದ ಅದ್ದೂರಿ ಸ್ವಾಗತ