ಉಡುಪಿ: ರಾಜ್ಯವೇ ಕಂಡು ಕೇಳರಿಯದ ದಬ್ಬಾಳಿಕೆ ಇಂದು ನಡೆದಿದೆ. ಸಿಎಂ ಕುಮಾರಸ್ವಾಮಿಯವರ ಆಣತಿಯಂತೆ ಕಾಂಗ್ರೆಸ್ ಕಾರ್ಯಕರ್ತರು ಬಿಎಸ್‍ವೈ ಮನೆಗೆ ಮುತ್ತಿಗೆ ಹಾಕಿದ್ದಾರೆ. ಇದು ಸಮ್ಮಿಶ್ರ ಸರ್ಕಾರದ ಗೂಂಡಾಗಿರಿ ಅಂತ ವಿಧಾನಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ವಾಗ್ದಾಳಿ ನಡೆಸಿದ್ದಾರೆ.
ಉಡುಪಿಯಲ್ಲಿ ಮಾತನಾಡಿದ ಅವರು, ಸಿಎಂ ಭಯೋತ್ಪಾದಕನ ಮಾದರಿಯ ಹೇಳಿಕೆ ಕೊಡುತ್ತಾರೆ. ಭಯೋತ್ಪಾದಕರ ಮಾದರಿಯಲ್ಲಿ ದಂಗೆ ಏಳುವುದಾಗಿ ಕರೆ ಕೊಟ್ಟಿದ್ದಾರೆ. ಕುಮಾರಸ್ವಾಮಿ ಸಿಎಂ ಕುರ್ಚಿಯಲ್ಲಿ ಕುಳಿತುಕೊಳ್ಳಲು ಅರ್ಹರಲ್ಲ. ಆಡಳಿತದಲ್ಲಿ ಹಿಡಿತ ಇಲ್ಲದ ಪರಿಸ್ಥಿತಿ ರಾಜ್ಯದಲ್ಲಿ ನಿರ್ಮಾಣವಾಗಿದೆ ವಾಗ್ದಾಳಿ ನಡೆಸಿದರು.

ಮಾಜಿ ಸಿಎಂ ಯಡಿಯೂರಪ್ಪ ಮೇಲಿನ ಎಲ್ಲಾ ಕೇಸ್ ಖುಲಾಸೆಯಾಗಿದೆ. ಸಿಎಂ ಹಳೇ ಕೇಸ್ ರೀ ಓಪನ್ ಮಾಡಿಸುವ ಬೆದರಿಕೆ ಹಾಕಿದ್ದಾರೆ. ಸಚಿವ ರೇವಣ್ಣ ಮೇಲಿನ ಕೇಸಿಗೂ ಪುನರ್ ಜೀವ ಕೊಡ್ತೀರಾ? ರೇವಣ್ಣ ಮೇಲೆ ಭಾರೀ ಭೂ ಕಬಳಿಕೆ ಆರೋಪವಿದೆ. ಮಾಜಿ ಸಚಿವ ಎ ಮಂಜು ಆರೋಪಗಳ ಸಮಗ್ರ ತನಿಖೆ ಮಾಡುತ್ತೀರಾ ಎಂದು ಕೋಟ ಶ್ರೀನಿವಾಸ ಪೂಜಾರಿ ಸವಾಲು ಹಾಕಿದರು.
ಐಟಿ ಹಾಗೂ ಇಡಿ ಸ್ವತಂತ್ರ ಸಂಸ್ಥೆಗಳು. ಈ ಕುರಿತು ಗೃಹಸಚಿವ ರಾಜ್ ನಾಥ್ ಸಿಂಗ್ ಸ್ಪಷ್ಟನೆ ನೀಡಿದ್ದಾರೆ. ಸ್ವಾತಂತ್ರ ಸಂಸ್ಥೆಯ ಮೇಲೆ ಆರೋಪ ಮಾಡುವುದು ಸರಿಯಲ್ಲ. ನುಡಿದಂತೆ ನಡೆಯುವ ಸರ್ಕಾರ ನಿಮ್ಮದಾಗಿರುವುದರಿಂದ ಡಿಕೆಶಿಯವರನ್ನು ಸಚಿವ ಸಂಪುಟದಿಂದ ಕೈಬಿಡಿ. ಇಡಿ ತನಿಖೆ ನಡೆಯುವಾಗ ಸಚಿವ ಡಿಕೆ ಶಿವಕುಮಾರ್ ಅಧಿಕಾರದಲ್ಲಿ ಇರುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಬಂಡೆ ಬಿದ್ದು ಕುಂದಾನಗರಿ ಅಪ್ಪಚ್ಚಿ:
ಕಾಂಗ್ರೆಸ್ ನಾಯಕರಾದ ಜಾರಕಿ ಹೋಳಿ ಸಹೋದರರಿಗೆ ಅಸಮಾಧಾನವಿದೆ. ಕುಂದಾನಗರದ ಮೇಲೆ ಕನಕಪುರದ ಬಂಡೆ ಬಿದ್ದು ಅಪ್ಪಚ್ಚಿಯಾಗಿದೆ. ಕಾಂಗ್ರೆಸ್ ಒಳಗೆ ಯಾವುದೂ ಸರಿಯಿಲ್ಲ ಎಂದು ಅವರೇ ಒಪ್ಪಿದ್ದಾರೆ. ಬಿಜೆಪಿ ಆಪರೇಷನ್ ಮಾಡುತ್ತಿಲ್ಲ. ನಾವೇನೂ ಯಾರನ್ನೂ ಸೆಳೆಯಲ್ಲ. ಅಸಮಾಧಾನ ಇದ್ದವರು ಬಿಜೆಪಿ ಸೇರಿದರೆ ನಂಬರ್ ಆಧಾರದ ಮೇಲೆ ಪಕ್ಷ ರಚನೆಯಾಗಬಹುದು. ಕಾಂಗ್ರೆಸ್ ಒಳಗೆ ಅವರಿಗವರೇ ಆಪರೇಷನ್ ಮಾಡಿಕೊಳ್ಳುವ ಪರಿಸ್ಥಿತಿ ಬಂದಿದೆ ಎಂದು ಕೋಟ ಶ್ರೀನಿವಾಸ ಪೂಜಾರಿ ಕಾಂಗ್ರೆಸ್ ಗೆ ಕುಟುಕಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply