ಕರ್ನಾಟಕದಲ್ಲಿ ಬಿಜೆಪಿ ಮುಳುಗುವ ಹಡಗು: ಸಿಎಂ ಸಿದ್ದರಾಮಯ್ಯ ವಂಗ್ಯ

ಬೆಂಗಳೂರು: ಕರ್ನಾಟಕದಲ್ಲಿ ಬಿಜೆಪಿ ಮುಳುಗುವ ಹಡಗು ಅಂತಾ ಸಿಎಂ ಸಿದ್ದರಾಮಯ್ಯ ಬಿಜೆಪಿಯನ್ನು ವ್ಯಾಖ್ಯಾನಿಸಿದ್ದಾರೆ. ಪ್ರಧಾನಿ ಮೋದಿ ಕರ್ನಾಟಕ ಭೇಟಿ ಬಗ್ಗೆ ಕೇಳಿದ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ಮೋದಿ ಭಾಷಣ ಕೇಳಿಲ್ಲ. ಕರ್ನಾಟಕದಲ್ಲಿ ಅಭಿವೃದ್ಧಿ ಯಾರು ಮಾಡಿದ್ದಾರೆ ಎನ್ನುವುದು ಜನರಿಗೆ ಗೊತ್ತಿದೆ ಎಂದು ಪ್ರಧಾನಿ ಮೋದಿಯ ಇಂದಿನ ಭಾಷಣಕ್ಕೆ ವ್ಯಂಗ್ಯವಾಡಿದರು.

ಕೇಂದ್ರ ಸರ್ಕಾರ ಹೇಳಿದ ಯಾವುದೇ ಕೆಲಸ ಮಾಡಿಲ್ಲ. ಅವರ ನೋಟು ಅಮಾನ್ಯೀಕರಣದಿಂದ ಬಡವರಿಗೆ ಹಾಗೂ ಜನಸಾಮಾನ್ಯರಿಗೆ ಯಾವುದೆ ಉಪಯೋಗ ಆಗಿಲ್ಲ. ಕರ್ನಾಟಕದಲ್ಲಿ ಅಭಿವೃದ್ಧಿ ಆಗಿದ್ದರೆ ಅದು ನಾವು ಮಾಡಿದ್ದು. ಕಾಂಗ್ರೆಸ್ ಸ್ವಾತಂತ್ರ್ಯ ಹೋರಾಟ ಮಾಡಿ ಅಧಿಕಾರಕ್ಕೆ ಬಂದಿದೆ. ಬಿಜೆಪಿ ಇದ್ದಕ್ಕಿದ್ದಂತೆ ಅಧಿಕಾರಕ್ಕೆ ಬಂದಿದೆ ಎಂದರು. ಬಿಜೆಪಿಗೆ ಯಾವುದೇ ಸಿದ್ಧಾಂತ ಇಲ್ಲ. ಭಾರತವನ್ನ ಹಿಂದೂರಾಷ್ಟ್ರ ಮಾಡ್ತೀವಿ ಅನ್ನೋದು ಸಿದ್ಧಾಂತ ಅಲ್ಲ. ಅದು ಸಂವಿಧಾನದ ವಿರೋಧಿ ಧೋರಣೆಯಾಗಿದೆ ಎಂದರು.

ಗುಜರಾತ್ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಲಿದೆ. ಟನ್‍ಗಟ್ಟಲೆ ದುಡ್ಡಿದೆ ನಾವೇ ಗೆಲ್ತೀವಿ ಎಂಬ ಭ್ರಮೆಯಲ್ಲಿ ಬಿಜೆಪಿ ಇದೆ. ಆದ್ರೆ ಅಲ್ಲಿನ ಜನ ಹಾಗೂ ಉದ್ಯಮಿಗಳು ಮೋದಿ ಹಾಗೂ ಜಿಎಸ್‍ಟಿ ವಿರುದ್ಧ ಇದ್ದಾರೆ. ಅಂಬಾನಿ, ಅದಾನಿ ನಮ್ಮೊಂದಿಗಿದ್ದರೆ ಗೆಲ್ತೀವಿ ಅನ್ನೋದು ಅವರ ಭ್ರಮೆ. ಗುಜರಾತ್‍ನಲ್ಲಿ ಯಾವುದೇ ಕಾರಣಕ್ಕು ಬಿಜೆಪಿ ಗೆಲ್ಲಲ್ಲ. ಕರ್ನಾಟದಲ್ಲಿ ಬಿಜೆಪಿ ಮುಳುಗುವ ಹಡಗು. ರಾತ್ರಿ ಕಂಡ ಬಾವಿಗೆ ಯಾರು ಹಗಲಿನಲ್ಲಿ ಬೀಳೋಲ್ಲ. ವಿಜಯಶಂಕರ್ ಸಹ ಇದೆ ಕಾರಣದಿಂದ ಬಿಜೆಪಿ ಬಿಟ್ಟು ಬರ್ತಿದ್ದಾರೆ ಎಂದರು.

ಮೋದಿ ಹುಟ್ಟಿದ್ದು ಸ್ವಾತಂತ್ರ್ಯ ಬಂದ ಮೇಲೆ. ಸ್ವಾತಂತ್ರ್ಯ ಹೋರಾಟದಲ್ಲಿ ಬಿಜೆಪಿಯ ಯಾವ ನಾಯಕರಿದ್ದರು? ಬಿಜೆಪಿಯವರಿಗೆ ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಇಲ್ಲ. ಅವರು ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದ್ದಾರೆ. ಕಾಂಗ್ರೆಸ್ ಸಾಮಾಜಿನ ನ್ಯಾಯದ ಪರ ಇದೆ ಎಂದರು. ಈ ಬಾರಿ ಸದನ ನಡೆಯೋಕೆ ಬಿಡೋಲ್ಲ ಎಂಬ ಬಿಜೆಪಿ ನಾಯಕರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿಎಂ, ಸದನ ನಡೆಸೋದು ಬಿಜೆಪಿಯವರಿಗಾಗಿ ಅಲ್ಲ. ರಾಜ್ಯದ ಸಮಸ್ಯೆ ಹಾಗೂ ಗಂಭೀರ ವಿಚಾರಗಳನ್ನ ಚರ್ಚೆ ಮಾಡೋಕೆ ಸದನ ನಡೆಸುತ್ತೇವೆ. ಆದ್ರೆ ಅವರು ಚರ್ಚೆಗೆ ವಿರೋಧ ಇರೋದಾದ್ರೆ ಸದನವನ್ನ ಬಹಿಷ್ಕಾರ ಮಾಡಲಿ ಎಂದರು.

ಸಚಿವ ಜಾರ್ಜ್ ರಾಜೀನಾಮೆ ನೀಡುವ ಅಗತ್ಯವೇ ಇಲ್ಲ. ಯಡಿಯೂರಪ್ಪ ಸುಪ್ರೀಂ ಕೋರ್ಟ್ ಆದೇಶವನ್ನ ಓದಿಲ್ಲ. ಸುಪ್ರೀಂ ಆದೇಶದಲ್ಲಿ ಜಾರ್ಜ್ ಹೆಸರು ಉಲ್ಲೇಖ ಮಾಡಿಲ್ಲ. ಬದಲಿಗೆ ಹಳೆ ಎಫ್‍ಐಆರ್ ಮೇಲೆ ತನಿಖೆ ನಡೆಸಿ ಅಂತ ಆದೇಶ ಮಾಡಿದೆ ಎಂದು ಜಾರ್ಜ್ ಪರ ನಿಂತರು. ಆದರೆ ಅದನ್ನ ತಿಳಿದುಕೊಳ್ಳದ ಯಡಿಯೂರಪ್ಪ ಸುಮ್ಮನೆ ಬಾಯಿಗೆ ಬಂದ ಹಾಗೆ ಮಾತನಾಡುತ್ತಾರೆ. ಜಾರ್ಜ್ ಮೇಲೆ ದಾಖಲಾಗಿರುವುದು ಎಫ್‍ಐಆರ್ ಅಷ್ಟೇ. ಎಫ್‍ಐಆರ್ ಬೇರೆ ಚಾರ್ಜ್‍ಶೀಟ್ ಬೇರೆ. ಅಲ್ಪಸಂಖ್ಯಾತ ವರ್ಗದಿಂದ ಬಂದಿದ್ದಾರೆ ಅಂತ ಜಾರ್ಜ್ ಅವರನ್ನು ಟಾರ್ಗೆಟ್ ಮಾಡಿದ್ದಾರೆ. ಆ ರೀತಿ ಆದ್ರೆ ಯಡ್ಯೂರಪ್ಪ ಮೇಲೆ ಎಷ್ಟು ಎಫ್‍ಐಆರ್ ಇದೆ. ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮೇಲೆ ಐಪಿಸಿ ಸೆಕ್ಷನ್ 307 ಕಾಯ್ದೆಯಡಿ ದೂರು ದಾಖಲಾಗಿದೆ. ನೈತಿಕತೆ ಬಗ್ಗೆ ಮಾತನಾಡೋದಾದ್ರೆ ಅವರು ಸಹ ರಾಜೀನಾಮೆ ನೀಡಬೇಕು ಅಲ್ಲವೇ ಎಂದು ಸಿಎಂ ಪ್ರಶ್ನಿಸಿದರು.

 

 

Comments

Leave a Reply

Your email address will not be published. Required fields are marked *