ಹೈಕಮಾಂಡ್ ಸೂತ್ರ ಒಪ್ಪಿದ್ರೆ ಸೋತವರಿಗೂ ಸಚಿವ ಸ್ಥಾನ!

ಬೆಂಗಳೂರು: ಉಪಚುನಾವಣೆಯಲ್ಲಿ ಸೋತ ಇಬ್ಬರಿಗೂ ಸಚಿವ ಸ್ಥಾನ ಸಿಗುತ್ತಾ? ಬಿಜೆಪಿ ಹೈಕಮಾಂಡ್‍ನ ಆ ಸೂತ್ರ ಒಪ್ಪಿದ್ರೆ ಒಬ್ಬರಿಗೆ ಗ್ಯಾರಂಟಿನಾ? ಇದು ರಾಜ್ಯ ಬಿಜೆಪಿ ವಲಯದಲ್ಲಿನ ಬಿಸಿಬಿಸಿ ಚರ್ಚೆ. ಗೆದ್ದವರನ್ನೆಲ್ಲಾ ಮಂತ್ರಿ ಮಾಡಬೇಕು ಅಂತಾ ಪಟ್ಟು ಹಿಡಿದಿರುವ ಸಿಎಂ ಯಡಿಯೂರಪ್ಪ ಮುಂದೆ ಬಿಜೆಪಿ ಹೈಕಮಾಂಡ್ ಕ್ಯಾಬಿನೆಟ್‍ನ 7+5+4 ಸೂತ್ರವನ್ನ ಇಟ್ಟಿದೆ ಎನ್ನಲಾಗಿದೆ.

ಬಿಜೆಪಿಯಲ್ಲಿ ಸಂಪುಟ ವಿಸ್ತರಣೆಯೇ ಬಹುದೊಡ್ಡ ಸಂಕಟವಾಗಿದೆ. ಸಿಎಂ ವಿದೇಶದಿಂದ ಬಂದ ಬಳಿಕ ಸಂಪುಟ ವಿಸ್ತರಣೆ ಪಕ್ಕಾ ಆಗಿದೆ. ಆದ್ರೆ ಸಂಪುಟ ವಿಸ್ತರಣೆಯಲ್ಲಿ ಸದ್ಯಕ್ಕೆ ಗೆದ್ದವರಿಗೆ ಮಾತ್ರ ಮೊದಲ ಆದ್ಯತೆ ಎನ್ನಲಾಗಿದೆ. ಸೋತವರದ್ದು ಜೂನ್ ಬಳಿಕವಷ್ಟೇ ತೀರ್ಮಾನ ಮಾಡಲು ನಿರ್ಧಾರ ಮಾಡಿದ್ದಾರೆ. ಹಾಗಾದ್ರೆ ಜೂನ್‍ನಲ್ಲಾದ್ರೂ ಸಚಿವ ಸ್ಥಾನ ಸಿಗೋದು ಗ್ಯಾರೆಂಟಿನಾ? ಅನ್ನೋ ಪ್ರಶ್ನೆಗೆ ಬಿಜೆಪಿ ಹೈಕಮಾಂಡ್‍ನ ಸೂತ್ರವನ್ನ ಯಡಿಯೂರಪ್ಪ ಒಪ್ಪಿದ್ರೆ ಮಾತ್ರ ಸೋತವರಿಗೂ ಸ್ಥಾನ ಎನ್ನಲಾಗುತ್ತಿದೆ.

ಹೈಕಮಾಂಡ್ ಸೂತ್ರ ಯಡಿಯೂರಪ್ಪಗೆ ನುಂಗಲಾರದ ತುತ್ತು. ಹಾಲಿ ಗೆದ್ದ 11 ಮಂದಿಯಲ್ಲಿ 7ರಿಂದ 8 ಮಂದಿಗಷ್ಟೇ ಸಚಿವ ಸ್ಥಾನ ಕೊಡೋದು. 4-5 ಸ್ಥಾನ ಸಚಿವ ಸ್ಥಾನಗಳನ್ನ ಮೂಲ ಬಿಜೆಪಿ ಶಾಸಕರಿಗೆ ಕೊಡಬೇಕು. ಉಳಿಯುವ 3ರಿಂದ 4 ಸಚಿವ ಸ್ಥಾನಗಳನ್ನ ಸೋತವರ ಜೊತೆಗೆ ಮುನಿರತ್ನ, ಪ್ರತಾಪ್ ಗೌಡ ಪಾಟೀಲ್‍ಗೆ ಮೀಸಲು ಇರಿಸಿಕೊಂಡು ತಂತ್ರಗಾರಿಕೆ ಮಾಡಲು ಹೈಕಮಾಂಡ್ ಪ್ಲಾನ್ ಮಾಡಿದೆ. ಹಾಗಾಗಿಯೇ ಜೂನ್ ಬಳಿಕ ಸೋತವರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ತೀರ್ಮಾನ ಅಂತಾ ಹೈಕಮಾಂಡ್ ಸಂದೇಶ ರವಾನಿಸಿದೆ ಎಂದು ತಿಳಿದು ಬಂದಿದೆ.

ಬಿಜೆಪಿ ಹೈಕಮಾಂಡ್ ಪ್ರಸ್ತಾಪಕ್ಕೆ ಯಡಿಯೂರಪ್ಪ ಇನ್ನೂ ಒಪ್ಪಿಲ್ಲ ಎನ್ನಲಾಗ್ತಿದ್ದು, ಸದ್ಯಕ್ಕೆ ಗೆದ್ದ ಎಲ್ಲ 11 ಮಂದಿಗೂ ಸಚಿವ ಸ್ಥಾನ ನೀಡಿ ಎಂದು ಪಟ್ಟು ಹಿಡಿದಿರೋದು ಕುತೂಹಲ ಮೂಡಿಸಿದೆ.

Comments

Leave a Reply

Your email address will not be published. Required fields are marked *