ಬೆಂಗಳೂರು: ಯಾರು ಸಚಿವ ಸ್ಥಾನ ಸಿಗದ್ದಕ್ಕೆ ಅಸಮಾಧಾನವಾಗಿದ್ದಾರೆ? ಯಾರು ರಾಜ್ಯಾಧ್ಯಕ್ಷರ ಆಯ್ಕೆ ವಿರುದ್ಧ ಮಾತಾನಾಡಿದ್ದಾರೆ? ಹೈ ಕಮಾಂಡ್ ನಿರ್ಧಾರದ ವಿರುದ್ಧ ಉಸಿರು ಎತ್ತುತ್ತಿರುವವರು ಯಾರು ಎಂಬುದರ ಕುರಿತು ಬಿಜೆಪಿಯ ಅಧ್ಯಕ್ಷ ಅಮಿತ್ ಶಾ ರಹಸ್ಯ ವರದಿ ಪಡೆದಿದ್ದಾರೆ.
ರಾಜ್ಯದ ರಾಜಕೀಯದ ಬೆಳವಣಿಗೆ ಕುರಿತು ಬಿಜೆಪಿ ಹೈ ಕಮಾಂಡ್ ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಸಚಿವ ಸಂಪುಟ ರಚನೆಯಾದ ನಂತರ ಅಮಿತ್ ಶಾ ಸಹ ರಾಜ್ಯ ರಾಜಕೀಯವನ್ನು ಗಂಭೀರವಾಗಿ ನೋಡುತ್ತಿದ್ದಾರೆ. ಸಚಿವ ಸ್ಥಾನದಿಂದ ವಂಚಿತರಾಗಿರುವ ಅಸಮಾಧಾನಿತರ ಶಾಸಕರ ಕುರಿತು ಸಹ ಅಷ್ಟೇ ನಿಗಾ ವಹಿಸಿದ್ದಾರೆ. ಹೀಗಾಗಿ ಬಿಜೆಪಿ ಶಾಸಕರ ಚಲನವಲನಗಳ ಕುರಿತು ವರದಿ ಪಡೆಯುತ್ತಿದ್ದು, ರಾಜ್ಯದ ನಾಯಕರಿಗೂ ಗೊತ್ತಿಲ್ಲದ ಮಾಹಿತಿಯನ್ನು ಅಮಿತ್ ಶಾ ಪಡೆಯುತ್ತಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

ಮೂರು ದಿನದಿಂದ ಬಿಜೆಪಿ ಶಾಸಕರು ಬೇಸರ ಹೊರಹಾಕುತ್ತಿದ್ದು, ಮಂತ್ರಿ ಮಾಡದೇ ಹೈಕಮಾಂಡ್ ಅನ್ಯಾಯ ಮಾಡಿದೆ ಎಂದು ಹೇಳುತ್ತಿರುವರ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳಲು ಮುಂದಾಗಿದೆ. ಅಸಮಾಧಾನಿತರನ್ನು ಮನವೊಲಿಸುವುದು ಕಾರ್ಯಸಾಧುವಲ್ಲ ಎಂಬುದನ್ನು ಅರಿತ ಹೈಕಮಾಂಡ್ ಅವರಿಗೆ ಬಿಸಿ ಮುಟ್ಟಿಸಿ ಪಾಠ ಕಲಿಸಲು ನಿರ್ಧರಿಸಿದೆ.
ಲಕ್ಷ್ಮಣ ಸವದಿಗೆ ಸಚಿವ ಸ್ಥಾನ ನೀಡಿದ್ದಕ್ಕೆ ನಿಜಕ್ಕೂ ನನಗೆ ಬೇಸರ ಇದೆ, ಇದನ್ನು ನಾನು ಓಪನ್ ಆಗಿ ಹೇಳುತ್ತೇನೆ. ಯಾರು ಏನು ಬೇಕಾದರೂ ತಿಳಿದುಕೊಳ್ಳಲಿ. ಹಾಗೇನಾದರೂ ಕಷ್ಟ ಎದುರಾದಲ್ಲಿ ನಾನು ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ ಎಂದು ಶಾಸಕ ರೇಣುಕಾಚಾರ್ಯ ಅಸಮಾಧಾನ ಹೊರಹಾಕಿದ್ದರು. ಗೆದ್ದವರಿಗೆ ಸಚಿವ ಸ್ಥಾನ ಕೊಡುವುದನ್ನು ಬಿಟ್ಟು ಸೋತವರಿಗೇಕೆ ನೀಡಿದ್ದಾರೆ. ಹಲವಾರು ಜನ ಗೆದ್ದವರಿದ್ದಾರೆ. ಬೆಳಗಾವಿ ಭಾಗದ ಹಿರಿಯ ನಾಯಕರಾಗಿರುವ ಉಮೇಶ್ ಕತ್ತಿ ಅವರಿಗೆ ಸಚಿವ ಸ್ಥಾನ ಕೊಡಬಹುದಿತ್ತು. ಆದರೆ, ಸೋತಿರುವ ಲಕ್ಷ್ಮಣ ಸವದಿಗೆ ಸಚಿವ ಸ್ಥಾನ ನೀಡಿರುವುದು ಸಾಕಷ್ಟು ಜನರಿಗೆ ಬೇಸರ ತಂದಿದೆ ಎಂದು ಹೇಳಿದ್ದರು.

ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದ ಬಾಲಚಂದ್ರ ಜಾರಕಿಹೊಳಿ ಸಚಿವ ಸ್ಥಾನದಿಂದ ವಂಚಿತರಾದ ಹಿನ್ನೆಲೆ ತೀವ್ರ ಬೇಸರಗೊಂಡು ಸಿಎಂ ಬಳಿ ಒಂದೊಂದೇ ಬೇಡಿಕೆಯನ್ನು ಸಲ್ಲಿಸುತ್ತಿದ್ದಾರೆ. ತಮಗೆ ಸಚಿವ ಸ್ಥಾನ ಸಿಗದಿದ್ದರೂ ಪರವಾಗಿಲ್ಲ. ಅಣ್ಣ ರಮೇಶ್ ಜಾರಕಿಹೊಳಿಯನ್ನು ಉಪಮುಖ್ಯಮಂತ್ರಿ ಮಾಡುವಂತೆ ಇಲ್ಲವೇ ಸಂಪುಟದಲ್ಲಿ ಪ್ರಮುಖ ಖಾತೆ ನೀಡುವಂತೆ ಬೇಡಿಕೆ ಇಟ್ಟಿದ್ದಾರೆ.
ಸಚಿವ ಸ್ಥಾನದಿಂದ ವಂಚಿತರಾಗಿರುವ ಇನ್ನೊರ್ವ ಸಚಿವ ಉಮೇಶ್ ಕತ್ತಿ ಅಸಮಾಧಾನ ಹೊರ ಹಾಕಿ, ಬೆಳಗ್ಗೆ 6 ಗಂಟೆಯವರೆಗೂ ನನ್ನ ಹೆಸರು ಇತ್ತು. ಆದರೆ 6.10ಕ್ಕೆ ನನ್ನ ಹೆಸರನ್ನು ಕೈಬಿಟ್ಟಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದರು. ಶಾಸಕನಾಗಿ 35 ವರ್ಷ ಆಯಿತು. 8 ಸಲ ಜನ ಆಶೀರ್ವಾದ ಮಾಡಿದ್ದಾರೆ. 1996ಯಿಂದ 1999ವರೆಗೂ ಮಂತ್ರಿಯಾಗಿ ಕೆಲಸ ಮಾಡಿದ್ದೇನೆ. 2008-2013ವರೆಗೂ ಕೂಡ ಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ಈ ಬಾರಿ ಕೂಡ ಮಂತ್ರಿ ಆಗಬೇಕೆಂಬ ಆಸೆ ಇತ್ತು. ಆದರೆ ಅರ್ಧ ಸಂಪುಟ ವಿಸ್ತರಣೆ ಮಾಡಿದ್ದಾರೆ, ಈಗ ನನ್ನ ಹೆಸರನ್ನು ಕೈಬಿಟ್ಟಿದ್ದಾರೆ ಎಂದು ಅಸಮಾಧಾನ ಹೊರ ಹಾಕಿದ್ದರು. ಇಂದು ಸಹ ಉಮೇಶ್ ಕತ್ತಿ ಸಿದ್ದರಾಮಯ್ಯನವರಿಗೆ ಕರೆ ಮಾಡಿ ಮಾತನಾಡಿದ್ದು, ಅವರ ನಡೆ ಕುತೂಹಲ ಕೆರಳಿಸಿದೆ.

ಇತ್ತೀಚೆಗೆ ಬಸನಗೌಡ ಪಾಟೀಲ್ ಯತ್ನಾಳ್ ಅವರು ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ನಳಿನ್ ಕುಮಾರ್ ಕಟೀಲ್ ಅವರನ್ನು ಆಯ್ಕೆ ಮಾಡಿದ ಹೈ ಕಮಾಂಡ್ ನಿರ್ಧಾರವನ್ನು ಪ್ರಶ್ನಿಸಿ ಆಕ್ರೋಶ ವ್ಯಕ್ತಪಡಿಸಿದ್ದರು.
ಪದೇ ಪದೆ ಈ ಜಿಲ್ಲೆಗೆ ವಲಸಿಗರೇ ಉಸ್ತುವಾರಿ ಸಚಿವರಾಗುತ್ತಿರುವುದು ಚಿತ್ರದುರ್ಗದ ದೌರ್ಭಾಗ್ಯ. ನಾನು 6 ಬಾರಿ ಶಾಸಕನಾಗಿ ಆಯ್ಕೆಯಾದರೂ ಸಹ ಸಚಿವ ಸ್ಥಾನ ನೀಡದಿರುವುದು ಬೇಸರ ತಂದಿದೆ ಎಂದು ಚಿತ್ರದುರ್ಗ ಶಾಸಕ ತಿಪ್ಪಾರೆಡ್ಡಿ ಸಹ ಅಸಮಾಧಾನ ಹೊರ ಹಾಕಿದ್ದರು.

Leave a Reply