ಮುಂದಿನ ವಿಧಾನಸಭೆ ಚುನಾವಣೆ ಗೆಲ್ಲಲು ರಣತಂತ್ರ- ಬದಲಾಗ್ತಾರಾ ಬಿಜೆಪಿ ರಾಜ್ಯಾಧ್ಯಕ್ಷ..?

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆ ಗೆಲ್ಲಲು ಬಿಜೆಪಿ ರಣತಂತ್ರ ಹೂಡುತ್ತಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್ ರಾಜ್ಯಾಧ್ಯಕ್ಷರನ್ನ ಬದಲಾಯಿಸಿಯೇ ಬಿಡುತ್ತಾ ಎಂಬ ಪ್ರಶ್ನೆ ಎದ್ದಿದೆ.

ಉತ್ತರಪ್ರದೇಶ ಇಂಪ್ಯಾಕ್ಟ್ ರಾಜ್ಯ ಬಿಜೆಪಿ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಾಗಿ ವರಿಷ್ಠರು ಒಕ್ಕಲಿಗ ಅಥವಾ ದಲಿತ ಸಮುದಾಯಕ್ಕೆ ಮಣೆ ಹಾಕ್ತಾರಾ..?, ಹಿಂದೂ ಫೈರ್ ಬ್ರ್ಯಾಂಡ್ ಇಬ್ಬರಲ್ಲಿ ಯಾರಾದ್ರೂ ಒಬ್ಬರು ಪಟ್ಟಕ್ಕೇರುತ್ತಾರಾ ಎಂಬ ಬಿಜೆಪಿ ಫ್ಯೂಚರ್ ಪ್ಲ್ಯಾನ್ ಎಕ್ಸ್ ಕ್ಲೂಸಿವ್ ಸ್ಟೋರಿ ಇಲ್ಲಿದೆ.

ಹೈಕಮಾಂಡ್ ಲೆಕ್ಕಾಚಾರ ಏನು….?
ಉತ್ತರಾಖಂಡದಲ್ಲಿ ಒಂದೇ ಅವಧಿಗೆ 3 ಸಿಎಂ ಬದಲಾವಣೆ ಮಾಡಿ ಬಿಜೆಪಿ ಸಕ್ಸಸ್ ಕಂಡಿದೆ. ಇತ್ತ ಉತ್ತರ ಪ್ರದೇಶದಲ್ಲಿ ಕೆಲ ಹಾಲಿ ಶಾಸಕರು, ಸಚಿವರಿಗೆ ಟಿಕೆಟ್ ಕೊಡದಿದ್ದರಿಂದ ಹಾಗೂ ಗೋವಾದಲ್ಲಿ ಪಕ್ಷಾಂತರಿಗಳಿಗೆ ಮಣೆ ಹಾಕಿ ಟಿಕೆಟ್ ನೀಡುವ ಮೂಲಕ ಬಿಜೆಪಿ ಗೆಲುವು ಸಾಧಿಸಿದೆ.

ರಾಜಕಾರಣ ನಿಂತ ನೀರಲ್ಲ, ಹರಿಯುವ ನೀರು. ಪ್ರಯೋಗ ಅನಿವಾರ್ಯ ಅನ್ನುತ್ತಿದೆ. ಕರ್ನಾಟಕದಲ್ಲೂ ಬಿಜೆಪಿ ಪಕ್ಷ ಮತ್ತು ಸಂಘಟನೆಯಲ್ಲಿ ಕೆಲ ಬದಲಾವಣೆ ಸಾಧ್ಯತೆ ಇದೆ. ರಾಜ್ಯಾಧ್ಯಕ್ಷರು, ಕೆಲ ಪದಾಧಿಕಾರಿಗಳನ್ನ ಬದಲಾವಣೆ ಮಾಡುವ ಸಾಧ್ಯತೆ ಬಗ್ಗೆ ಚರ್ಚೆ ನಡೆಯುತ್ತಿದ್ದು, ಕಟೀಲ್ ಜಾಗಕ್ಕೆ ಹಿಂದೂ ಫೈರ್ ಬ್ರ್ಯಾಂಡ್‍ಗಳನ್ನ ತಂದು ಕೂರಿಸುವ ಬಗ್ಗೆ ಲೆಕ್ಕಚಾರ ನಡೆಯುತ್ತಿದೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಇದನ್ನೂ ಓದಿ: ಉತ್ತರಾಖಂಡ್‌ನಲ್ಲಿ ಬಿಜೆಪಿ ಗೆದ್ದಿದ್ದು ಹೇಗೆ?

ಒಕ್ಕಲಿಗರು, ಸಂಘದ ದೃಷ್ಟಿಯಿಂದ ನಿಷ್ಠರು, ಹಿಂದುತ್ವದ ದೃಷ್ಟಿಯಿಂದ ಫೈರ್ ಬ್ರ್ಯಾಂಡ್ ಪಟ್ಟ ಕಟ್ಟಲಾಗುತ್ತದೆ. ಸಿ.ಟಿ.ರವಿ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ರಾಜ್ಯಾಧ್ಯಕ್ಷರ ರೇಸ್‍ನಲ್ಲಿ ಇದ್ದಾರೆ. ಲಿಂಗಾಯತ ಸಮುದಾಯದವರು ಸಿಎಂ ಆಗಿದ್ರೆ, ಒಕ್ಕಲಿಗ ಸಮುದಾಯಕ್ಕೆ ರಾಜ್ಯಾಧ್ಯಕ್ಷ ಪಟ್ಟ ಎಂಬ ಚರ್ಚೆ ನಡೆಯುತ್ತದೆ ಎನ್ನಲಾಗಿದೆ. ಇದನ್ನೂ ಓದಿ: ‌ಉತ್ತರ ಪ್ರದೇಶ, ಉತ್ತರಾಖಂಡ್‌ನಲ್ಲಿ ಬಿಜೆಪಿ ಅಧಿಕಾರಕ್ಕೆ

ಮಹಿಳಾ ಮತದಾರರನ್ನ ಸೆಳೆಯಲು ಕೂಡ ಬಿಜೆಪಿ ಲೆಕ್ಕಾಚಾರ ಹಾಕುತ್ತಿದೆ. ಯುಪಿಯಲ್ಲಿ 55% ಮಹಿಳಾ ಮತದಾರರು ಬಿಜೆಪಿಗೆ ಜೈ ಅಂದಿದ್ದಾರೆ ಅಂತ ಸಮೀಕ್ಷೆಗಳು ಹೇಳಿವೆ. ಹಾಗಾಗಿ ಕರ್ನಾಟಕದಲ್ಲೂ ಮಹಿಳಾ ಅಧ್ಯಕ್ಷೆ ಪ್ರಯೋಗ ಮಾಡಿದ್ರೆ ಹೇಗೆ ಎಂಬ ಚರ್ಚೆ ನಡೆಯುತ್ತದೆ. ಎರಡ್ಮೂರು ಗುಪ್ತ ಸರ್ವೆಗಳನ್ನ ಮಾಡಿ ಬಳಿಕ ಹೈಕಮಾಂಡ್ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಬಹುದು. ಒಟ್ಟಿನಲ್ಲಿ ಏಪ್ರಿಲ್‍ನಲ್ಲಿ ಬದಲಾವಣೆಯ ಬಗ್ಗೆ ಸ್ಪಷ್ಟವಾದ ಚಿತ್ರಣ ಹೊರಬೀಳುವ ಸಾಧ್ಯತೆ ಇದೆ.

Comments

Leave a Reply

Your email address will not be published. Required fields are marked *