ಅರುಣ್ ಬಡಿಗೇರ್
ಪ್ರಧಾನಿ ನರೇಂದ್ರ ಮೋದಿ ಅವರು ಭಾರೀ ಬಹುಮತದೊಂದಿಗೆ 2ನೇ ಅವಧಿಗೆ ಪ್ರಧಾನಿಯಾಗಿ ಆಯ್ಕೆ ಆಗಿ ದಾಖಲೆ ಬರೆದಿದ್ದಾರೆ. ಇತ್ತ ಕಳೆದ ಬಾರಿ ಉತ್ತರ ಪ್ರದೇಶದಲ್ಲಿ ಅತೀ ಹೆಚ್ಚು ಸ್ಥಾನಗಳನ್ನು ಪಡೆದಿದ್ದ ಬಿಜೆಪಿ ಈ ಬಾರಿ ಎಸ್‍ಪಿ, ಬಿಎಸ್‍ಪಿ ಮೈತ್ರಿ ಹಿನ್ನೆಲೆಯಲ್ಲಿ ಧೂಳಿಪಟ ಆಗಲಿದೆ ಎಂದು ಹಲವು ವಿಶ್ಲೇಷಣೆ ಮಾಡಿದ್ದರು. ಆದರೆ ಬಿಜೆಪಿ ಮತ್ತೆ ಉತ್ತರ ಪ್ರದೇಶದಲ್ಲಿ ಕಮಾಲ್ ಮಾಡಿದ್ದು, ಈ ಸಾಧನೆಗೆ ಅಲ್ಲಿನ ಮುಸ್ಲಿಂ ಮಹಿಳೆಯ ಬೆಂಬಲ ಕಾರಣವಾಗಬಹುದೇ ಎನ್ನುವ ಅನುಮಾನ ಎದ್ದಿದೆ.
ಯುಪಿಯಲ್ಲಿ 80 ಲೋಕಸಭೆ ಸೀಟುಗಳನ್ನ ಹೊಂದಿರುವ ಬಿಜೆಪಿಗೆ ಅಲ್ಲಿನ ಮಹಾಮೈತ್ರಿ ಭಾರೀ ಪೈಪೋಟಿ ನೀಡಿತ್ತು. ಆದರೆ ಚುನಾವಣೆಗೂ ಮುನ್ನ ಉತ್ತರ ಪ್ರದೇಶದಲ್ಲಿ ಆಶ್ಚರ್ಯಕರ ರೀತಿಯಲ್ಲಿ ಒಂದಿಷ್ಟು ಬೆಳವಣಿಗೆಗಳು ನಡೆದಿದ್ದು ಮುಸ್ಲಿಂ ಸಮುದಾಯ ಕುಟುಂಬದಲ್ಲಿ ಭಾರೀ ಚರ್ಚೆ ನಡೆದಿದ್ದ ವಿಚಾರ ಬುಲೆಟ್ ರಿಪೋರ್ಟಿಂಗ್ ವೇಳೆ ಬೆಳಕಿಗೆ ಬಂದಿತ್ತು.

2011ರ ಜನಸಂಖ್ಯೆ ಆಧಾರವಾಗಿ ಉತ್ತರ ಪ್ರದೇಶದಲ್ಲಿ ಹಿಂದುಳಿದ ವರ್ಗಗಳು(ಒಬಿಸಿ) ಒಟ್ಟು ಶೇ.44, ದಲಿತರು ಶೇ.21.01, ಮೇಲ್ವರ್ಗದವರು ಶೇ.16, ಮುಸ್ಲಿಮರು ಶೇ.19.3, ಕ್ರೈಸ್ತರು ಶೇ.0.18 ರಷ್ಟಿದೆ. ಈ ಜಾರಿ ಲೆಕ್ಕಾಚಾರ ಮೇಲೆಯೇ ಎಸ್‍ಪಿ, ಬಿಎಸ್‍ಪಿ ಮೈತ್ರಿ ಆಗಿತ್ತು.
ಉತ್ತರ ಪ್ರದೇಶದಲ್ಲಿದ್ದ ಮುಸ್ಲಿಂ ಮಹಿಳೆಯರನ್ನ ಮಾತನಾಡಿಸಿದಾಗ ನೇರವಾಗಿ ಪ್ರತಿಕ್ರಿಯೆ ನೀಡಲು ಹಿಂದೇಟು ಹಾಕಿದ್ದರು. ಆದರೆ ಆಫ್ ದಿ ರೆಕಾರ್ಡ್ ವೇಳೆ ಮೋದಿ ಪರ ಒಲವು ವ್ಯಕ್ತಪಡಿಸಿದ್ದರು. ಈ ವಿಚಾರಕ್ಕೆ ಪುಷ್ಠಿ ನೀಡುವಂತೆ ಕುಟುಂಬಗಳಲ್ಲಿ ಮತ ಚಲಾವಣೆ ವಿಚಾರದಲ್ಲಿ ದೊಡ್ಡ ಜಗಳಗಳೇ ನಡೆದಿದೆ ಎಂದು ಮುಸ್ಲಿಂ ಪುರುಷರೇ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ.

ತಲಾಖ್ ವಿಚಾರದಲ್ಲಿ ಹಾಗೂ ಬಹುಪತ್ನಿತ್ವ ವಿಚಾರದಲ್ಲಿ ಬಿಜೆಪಿ ತೆಗೆದುಕೊಂಡ ನಿರ್ಧಾರದಿಂದ ಮುಸ್ಲಿಂ ಸಮುದಾಯದ ಮಹಿಳೆಯರು ಬಿಜೆಪಿಯನ್ನು ಬೆಂಬಲಿಸಿದ್ದಾರೆ. ಎಷ್ಟೋ ಮನೆಗಳಲ್ಲಿ ಮಹಿಳೆಯರು ತಮ್ಮ ಗಂಡಂದಿರ ವಿರುದ್ಧ ಜಗಳ ಮಾಡಿ ಬಿಜೆಪಿಗೆ ಮತ ಹಾಕುತ್ತೇವೆ ಎಂದಿದ್ದರು. ಎಷ್ಟೋ ಕುಟುಂಬಗಳಲ್ಲಿ ಮತ ಚಲಾವಣೆ ವಿಚಾರದಲ್ಲಿ ಗಲಾಟೆ ನಡೆದಿದೆ. ನಮ್ಮ ಧ್ವನಿಯಾಗಿದ್ದಾರೆ ಅಂತ ಮೋದಿ ಬಗ್ಗೆ ಮುಸ್ಲಿಂ ಮಹಿಳೆಯರು ತಿಳಿಸಿದ್ದರು.
ಮೋದಿಗೆ ವೋಟು ಒತ್ತುವ ಭಯದಿಂದಲೇ ಬಹಳಷ್ಟು ಮುಸ್ಲಿಂ ಪುರುಷರು ತಮ್ಮ ಹೆಣ್ಮಕ್ಕಳನ್ನ ಮನೆಯಲ್ಲೇ ಕೂಡಿ ಹಾಕಿ ಮತಚಲಾವಣೆ ಮಾಡಿದ್ದರು. ಯಾವಾಗ ಮಹಿಳೆಯರು ಬಿಜೆಪಿ ಪರ ನಿಂತಿರೋದು ಗೊತ್ತಾಯ್ತೋ ಮುಸ್ಲಿಂ ಸಮುದಾಯದ ನಾಯಕರು ಫತ್ವಾ ಹೊರಡಿಸಿದ್ದರು. ಮಹಿಳೆಯರಿಗೆ ಮತದಾನ ಮಾಡಿಸದಂತೆ ಕುಟುಂಬಗಳಿಗೆ ಗುಪ್ತವಾಗಿ ಫತ್ವಾ ಹೊರಡಿಸಿದ್ದರು ಎನ್ನುವ ವಿಚಾರವನ್ನು ಹಲವು ಮುಸ್ಲಿಂ ಪುರುಷರು ಬಹಿರಂಗ ಪಡಿಸಿದ್ದರು.

ಕೇವಲ ಮುಸ್ಲಿಂ ಮಹಿಳೆಯರ ಶಕ್ತಿ ಒಂದೇ ಮೋದಿಗೆ ಸಿಕ್ಕಿಲ್ಲ. ಬೇರೆ ಜಾತಿ, ಧರ್ಮದ ಬಡ ವರ್ಗದ ಸ್ತ್ರೀ ಶಕ್ತಿಯೂ ಮೋದಿಗೆ ಸಿಕ್ಕಿದೆ. ಇದು ನಮ್ಮ ಉತ್ತರ ಪ್ರದೇಶದ ಪಯಣದಲ್ಲಿ ಕಂಡು ಬಂದ ಸತ್ಯಾಂಶ. ರಾಜ್ಯದಲ್ಲೂ ಬಿಜೆಪಿ ಸರ್ಕಾರ ಇದ್ದ ಕಾರಣ ಕೇಂದ್ರ ಸರ್ಕಾರ ಹಲವು ಯೋಜನೆಗಳು ಇಲ್ಲಿನ ಮಹಿಳೆಯರನ್ನು ತಲುಪಿತ್ತು. ಉಜ್ವಲಾ ಯೋಜನೆಯ ಬಗ್ಗೆ ಮಹಿಳೆಯರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈ ಎಲ್ಲ ಕಾರಣದಿಂದಾಗಿ ಮೋದಿ ಅವರಿಗೆ ಬಹುದೊಡ್ಡ ಮಟ್ಟದಲ್ಲಿ ಉತ್ತರ ಪ್ರದೇಶದಲ್ಲಿ ಮಹಿಳಾ ಶಕ್ತಿ ವರದಾನವಾಗಿದೆ.

ಇದರ ಜೊತೆಯಲ್ಲಿ ಕಾಂಗ್ರೆಸ್ ಸ್ಪರ್ಧಿಸಿದ್ದರಿಂದ ಮಹಾ ಮೈತ್ರಿ ಕೂಟದ ಮತಗಳು ವಿಭಜನೆ ಆಗಿ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.
ಬಿಜೆಪಿ ಗಳಿಸಿದ್ದೇಷ್ಟು?
ಉತ್ತರ ಪ್ರದೇಶದಲ್ಲಿ ಬಿಜೆಪಿ ಮತ್ತು ಮೈತ್ರಿ ಅಪ್ನಾ ದಳ್ (ಎಸ್) ಪಕ್ಷಗಳು ಒಟ್ಟಾರೆ 60 ಸ್ಥಾನ ಗೆಲುವು ಪಡೆದಿದ್ದು, ಎಸ್‍ಪಿ-ಬಿಎಸ್‍ಪಿ 15 ಸ್ಥಾನ ಪಡೆದಿದೆ. ಅಮೇಠಿಯಲ್ಲಿ ರಾಹುಲ್ ಗಾಂಧಿ ಸೋಲುಂಡಿದ್ದು, ರಾಯ್ ಬರೇಲಿಯಲ್ಲಿ ಸೋನಿಯಾ ಅವರಿಗೆ ಮಾತ್ರ ಗೆಲುವು ಸಿಕ್ಕಿದೆ.

Leave a Reply