ಬಹುಮತ ಸಾಬೀತುಪಡಿಸಲು 15 ದಿನದ ಕಾಲಾವಕಾಶ ಕೊಟ್ಟಿದ್ದು ದೇಶದಲ್ಲಿ ಇದೇ ಮೊದಲು: ಹೆಚ್‍ಡಿಕೆ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಕೇಂದ್ರ ಸರ್ಕಾರ ಅಧಿಕಾರದ ದುರಪಯೋಗ ಮಾಡಿಕೊಳ್ಳುತ್ತಿದೆ. ಸಂವಿಧಾನದ ವಿರುದ್ಧ ಬಿಜೆಪಿಯವರು ನಡೆದುಕೊಳ್ಳುತ್ತಿದ್ದಾರೆ. ರಾಜ್ಯಪಾಲ ವಜೂಭಾಯಿ ವಾಲಾರವರ ಮೇಲೆ ಕೇಂದ್ರ ಒತ್ತಡ ಹಾಕಿದೆ ಅಂತಾ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ.ಕುಮಾರಸ್ವಾಮಿ ಗಂಭೀರವಾಗಿ ಆರೋಪಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಪಾಲರು ಬಿಜೆಪಿಗೆ ಬಹುಮತ ಸಾಬೀತು ಮಾಡಲು 15 ದಿನದ ಕಾಲಾವಕಾಶ ನೀಡಿದ್ದು, ದೇಶದಲ್ಲಿಯೇ ಮೊದಲಾಗಿದೆ. ಚುನಾವಣೆಯಲ್ಲಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿಗೆ ರಾಜ್ಯಪಾಲರು 4ರಿಂದ5 ದಿನದ ಅವಕಾಶ ಕೊಡುವುದನ್ನು ಕೇಳಿದ್ದೇವೆ ಮತ್ತು ನೋಡಿದ್ದೇವೆ. 15 ದಿನದ ಅವಕಾಶ ಪಡೆದುಕೊಂಡ ಬಿಜೆಪಿ ಕುದುರೆ ವ್ಯಾಪಾರಕ್ಕೆ ಮುಂದಾಗಲಿದೆ ಅಂತಾ ಅಸಮಧಾನ ವ್ಯಕ್ತಪಡಿಸಿದ್ರು.

ವಿಧಾನಸೌಧದ ಬಳಿ ಕಾಂಗ್ರೆಸ್ ನಡೆಸುತ್ತಿರುವ ಪ್ರತಿಭಟನೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡರು ಸಹ ಭಾಗಿಯಾಗಲಿದ್ದಾರೆ. ದೇಶದ ಎಲ್ಲ ಪ್ರಾದೇಶಿಕ ಪಕ್ಷಗಳ ಬೆಂಬಲ ಪಡೆದು ಪ್ರತಿಭಟನೆಯ ಮುಂದಾಳತ್ವವನ್ನು ತೆಗೆದುಕೊಳ್ಳಬೇಕೆಂದು ನಾನು ನಮ್ಮ ತಂದೆಯವರಲ್ಲಿ ಮನವಿ ಮಾಡಿಕೊಳ್ಳಲಿದ್ದೇನೆ. ದೇಶದ ರಕ್ಷಣೆಗಾಗಿ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ, ಬಿಎಸ್‍ಪಿ ನಾಯಕಿ ಮಾಯಾವತಿ, ಚಂದ್ರಬಾಬು ನಾಯ್ಡು, ಚಂದ್ರಶೇಖರ್ ರಾವ್ ಸೇರಿದಂತೆ ಎಲ್ಲ ನಾಯಕರ ಬೆಂಬಲಕ್ಕೆ ಮನವಿ ಮಾಡಿಕೊಳ್ಳುತ್ತೇವೆ ಅಂತಾ ತಿಳಿಸಿದ್ರು.

2008 ರಿಂದ 2013ರಲ್ಲಿ ಬಿಜೆಪಿ ಮಾಡಿದ ಹಗರಣಗಳನ್ನು ನಾಡಿನ ಜನತೆ ನೆನಪು ಮಾಡಿಕೊಳ್ಳಬೇಕಿದೆ. ಭ್ರಷ್ಟಾಚಾರ ನಡೆಸುವುದು ಬಿಜೆಪಿಯ ಹುಟ್ಟುಗುಣ ಅದು ಅವರನ್ನು ಬಿಟ್ಟು ಹೋಗಲ್ಲ. ಪ್ರಜಾಪ್ರಭುತ್ವದ ವ್ಯವಸ್ಥೆಯನ್ನು ಉಳಿಸುವ ಸಲುವಾಗಿ ನಾಡಿನ ಜನರ ಬೀದಿಗಿಳಿದು ಶಾಂತಿಯುತ ಹೋರಾಟ ನಡೆಸಬೇಕೆಂದು ಕರೆ ಕೊಟ್ಟರು.

Comments

Leave a Reply

Your email address will not be published. Required fields are marked *