ಸರ್ಕಾರದಲ್ಲಿ ಬಾಕಿ ಬಿಲ್ ಪಾವತಿಗೆ ದುಪ್ಪಟ್ಟು ಕಮಿಷನ್ ಆರೋಪ – ಸಿಎಂ, ಡಿಸಿಎಂ ರಾಜೀನಾಮೆಗೆ ಬಿಜೆಪಿ ಆಗ್ರಹ

ಬೆಂಗಳೂರು: ಕಾಂಗ್ರೆಸ್ (Congress) ಸರ್ಕಾರದಲ್ಲಿ ದುಪ್ಪಟ್ಟು ಕಮಿಷನ್ ಪಡೆಯುತ್ತಿದ್ದಾರೆಂದು ಗುತ್ತಿಗೆದಾರರು ಆರೋಪಿಸಿದ್ದಾರೆ. ಸಿಎಂಗೆ ನೈತಿಕತೆ ಇದ್ದರೆ ರಾಜೀನಾಮೆ ಕೊಟ್ಟು ಹೋಗಲಿ ಎಂದು ವಿಪಕ್ಷ ನಾಯಕ ಆರ್.ಅಶೋಕ್ (R.Ashok) ಆಗ್ರಹಿಸಿದರು.

ಸಿಎಂಗೆ ಗುತ್ತಿಗೆದಾರರು ಪತ್ರ ಬರೆದ ಬಗ್ಗೆ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ಕೊಟ್ಟ ಅವರು, ಗುತ್ತಿಗೆದಾರರು ಸಿಎಂಗೆ ಪತ್ರ ಬರೆದು ಇದು ಭ್ರಷ್ಟ ಸರ್ಕಾರ ಅಂದಿದ್ದಾರೆ. ಹಿಂದಿನ ಸರ್ಕಾರಗಳಿಗಿಂತ ದುಪ್ಪಟ್ಟು ಕಮಿಷನ್ ಪಡೀತಿದ್ದಾರೆಂದು ಆರೋಪಿಸಿದ್ದಾರೆ. ನಮ್ಮ ಮೇಲೆ ಕಮಿಷನ್ ಆರೋಪ ಮಾಡಿದ್ದ ಸಿದ್ದರಾಮಯ್ಯ ಈಗೇನು ಅಂತಾರೆ? ಗುತ್ತಿಗೆದಾರರು ಈ ಸರ್ಕಾರ 80% ಕಮೀಷನ್ ಸರ್ಕಾರ ಅಂತ ಆರೋಪಿಸಿದ್ದಾರೆ. ರೆಡ್ ಹ್ಯಾಂಡಾಗಿ ಲಂಚ ಹೊಡೆಯುತ್ತಿರುವ ಆರೋಪ ಮಾಡಿದ್ದಾರೆ. ಈ ಸರ್ಕಾರದವರಿಗೆ ನೈತಿಕತೆ ಇದರೆ ಅಧಿಕಾರ ಬಿಟ್ಟು ತೊಲಗಲಿ. ಯಾವ ಮುಖ ಇಟ್ಕೊಂಡು ಆಡಳಿತ ಮಾಡ್ತಾರೆ ಎಂದು ವಾಗ್ದಾಳಿ ನಡೆಸಿದರು.ಇದನ್ನೂ ಓದಿ: ಬಿಡದಿ ಟೌನ್‌ಶಿಪ್ ಜಟಾಪಟಿ – ಡಿಕೆಶಿ ವಿರುದ್ಧ ಬಿಜೆಪಿ ನಾಯಕರು ವಾಗ್ದಾಳಿ

ನಮ್ಮ ಮೇಲೆ ಆರೋಪ ಮಾಡಿದ್ದರು. ಆದರೆ ದಾಖಲೆ ಕೊಡಲಿಲ್ಲ. ಈಗ ದಾಖಲೆ ಸಮೇತ ಗುತ್ತಿಗೆದಾರರೇ ಕಾಂಗ್ರೆಸ್ ಸರ್ಕಾರದ ಮೇಲೆ ಡಬಲ್ ಲಂಚದ ಆರೋಪ ಮಾಡಿದ್ದಾರೆ. ಈ ಆರೋಪ ಹಿನ್ನೆಲೆ ಸಿದ್ದರಾಮಯ್ಯ ರಾಜೀನಾಮೆ ಕೊಡಲಿ, ಅಧಿಕಾರ ತ್ಯಜಿಸಬೇಕು. ಸಚಿವರು ಈವರೆಗೂ ಗುತ್ತಿಗೆದಾರರ ಆರೋಪಕ್ಕೆ ಉತ್ತರ ಕೊಟ್ಟಿಲ್ಲ. ಗುತ್ತಿಗೆದಾರರು ಕಮಿಷನ್ ಆರೋಪ ಮಾಡಿರುವ ಯಾವ ಸಚಿವರೂ ತಮ್ಮ ಇಲಾಖೆಯಲ್ಲಿ ಕಮಿಷನ್ ಪಡೀತಿಲ್ಲ ಅಂತ ಹೇಳಿಲ್ಲ. ಸಿಎಂ ಕೂಡ ಸ್ಪಷ್ಟೀಕರಣ ಕೊಟ್ಟಿಲ್ಲ. ಅಲ್ಲಿಗೆ ಇದು 80% ಸರ್ಕಾರ ಅಂತ ಅವರೇ ಒಪ್ಪಿಕೊಂಡಂತಾಗಿದೆ ಎಂದು ಹೇಳಿದರು.

ಇನ್ನೂ ಈ ಕುರಿತು ಅಶ್ವಥ್ ನಾರಾಯಣ ಮಾತನಾಡಿ, ಗುತ್ತಿಗೆದಾರರು ದುಪ್ಪಟ್ಟು ಕಮಿಷನ್ ಆರೋಪ ಮಾಡಿರುವ ಹಿನ್ನೆಲೆಯಲ್ಲಿ ಸಿಎಂ, ಡಿಸಿಎಂ ಅಧಿಕಾರದಲ್ಲಿ ಮುಂದುವರೆಯುವ ನೈತಿಕತೆ ಕಳೆದುಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಬೆಂಗಳೂರಿನಲ್ಲಿ ಮಾತಾಡಿದ ಅವರು, ನಮ್ಮ ಮೇಲೆ ಆರೋಪ ಬಂದಾಗ ರಾಜೀನಾಮೆ ಕೇಳಿದ್ದರು. ಈಗ ಸಿಎಂ, ಡಿಸಿಎಂ ರಾಜೀನಾಮೆ ಕೊಡ್ತಾರಾ? ಕಮಿಷನ್ ಆರೋಪ ಹೊತ್ತು ಯಾವ ನೈತಿಕತೆಯಿಂದ ಅಧಿಕಾರದಲ್ಲಿ ಮುಂದುವರೆಯುತ್ತಾರೆ? ನಮ್ಮ ಮೇಲೆ ಸುಳ್ಳು ಆರೋಪ ಮಾಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರದಲ್ಲಿ ನಿತ್ಯ ಕಮಿಷನ್, ಭ್ರಷ್ಟಾಚಾರ. ಗುತ್ತಿಗೆದಾರರು ಈಗ ಸ್ಪೆಷಲ್ ಎಲ್‌ಒಸಿಗೆ ಕಮಿಷನ್, ಬಿಲ್ ಪಾವತಿಗೆ ಕಮಿಷನ್ ಕೊಡಬೇಕಿದೆ. ಗುತ್ತಿಗೆದಾರರ ಆರೋಪವನ್ನು ಸಿಎಂ ಒಪ್ಪಿಕೊಂಡಿದ್ದಾರೆ ಅನ್ನುವಂತೆ ನಡೆದುಕೊಳ್ತಿದ್ದಾರೆ. ಈವರೆಗೆ ಗುತ್ತಿಗೆದಾರರ ಆಪಾದನೆಗೆ ಸರ್ಕಾರ ಸ್ಪಷ್ಟನೆ ಕೊಟ್ಟಿಲ್ಲ, ನಿಶ್ಯಬ್ಧವಾಗಿದೆ. ಇದು ಸರ್ಕಾರದ ನವರಾತ್ರಿ ಮೌನನಾ ಎಂದು ಟಕ್ಕರ್ ಕೊಟ್ಟರು.ಇದನ್ನೂ ಓದಿ: ನೋವಿನ ಸಂದರ್ಭದಲ್ಲಿ ಸಂಭ್ರಮ ಬೇಡವೆಂದು ಹಿಂದೆ ಸರಿದ ರಿಷಬ್ ಶೆಟ್ಟಿ