ಈಗಾಗಲೇ ನಾನು ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದೇನೆ: ಲೆಹರ್ ಸಿಂಗ್

ಬೆಂಗಳೂರು: ನನ್ನ ಜೀವನದಲ್ಲಿ ನನಗೆ ಡೈರಿ ಬರೆದು ಅಭ್ಯಾಸವೇ ಇಲ್ಲ, ನಾನು ಡೈರಿ ಬರೆಯಲ್ಲ, ನನ್ನ ಸಹಿ ದುರುಪಯೋಗ ಪಡಿಸಿಕೊಳ್ಳಲಾಗಿದೆ, ಡೈರಿ ಪ್ರಕರಣವನ್ನು ಸಿಬಿಐ ತನಿಖೆಗೆ ಕೊಡಿ, ನಾನು ಯಾವುದೇ ತನಿಖೆಗೆ ಸಿದ್ಧ ಅಂತಾ ವಿಧಾನಪರಿಷತ್ ಸದಸ್ಯ, ಬಿಜೆಪಿ ಸಹ ಖಜಾಂಚಿ ಲೆಹರ್ ಸಿಂಗ್ ಹೇಳಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು, ಇದೊಂದು ದೊಡ್ಡ ಷಡ್ಯಂತ್ರವಾಗಿದ್ದು, ಲೆಹರ್ ಎಂದೇ ನಾನು ಸಹಿ ಮಾಡೋದು. ಆದ್ರೆ ಡೈರಿಯಲ್ಲಿ ಲೆಹರ್ ಸಿಂಗ್ ಅಂತಿದೆ, ಆದರೆ ಕಾಂಗ್ರೆಸ್ ಬಿಡುಗಡೆ ಮಾಡಿದ ಡೈರಿಯಲ್ಲಿ ಇದು ತಪ್ಪಾಗಿದೆ. ಈಗಾಗಲೇ ಶುಕ್ರವಾರ ಬಿಜೆಪಿಯಿಂದ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ ಎಂದು ತಿಳಿಸಿದರು.

ಬೆಂಗಳೂರು ಪೊಲೀಸ್ ಕಮಿಷನರ್ ಗೂ ಇವತ್ತು ದೂರು ನೀಡಿದ್ದು, ಡಿಜಿಪಿಗೂ ನಾಳೆ ದೂರು ನೀಡುತ್ತೇನೆ. ಅಲ್ಲದೆ ನಕಲಿ ಡೈರಿ ಮೂಲ ಪತ್ತೆಗೆ ಗೃಹ ಸಚಿವರನ್ನು ಭೇಟಿ ಮಾಡಿ ಮನವಿ ಮಾಡಿಕೊಳ್ಳುತ್ತೇನೆ ಎಂದರು.

ಇದು ನನ್ನ ರಾಜಕೀಯ ಜೀವನದ ಪ್ರಥಮ ಸುದ್ದಿಗೋಷ್ಠಿ, ಇಲ್ಲಿವರೆಗೆ ಸುದ್ದಿಗೋಷ್ಠಿ ಮಾಡುವ ಯಾವುದೇ ಅನಿವಾರ್ಯತೆ ಬಂದಿರಲಿಲ್ಲ. ಇದೀಗ ಅನಿವಾರ್ಯತೆ ಬಂದಿರೋದ್ರಿಂದ ಸುದ್ದಿಗೋಷ್ಠಿ ನಡೆಸುತ್ತಿದ್ದೇನೆ, ನನ್ನ ವಿರುದ್ಧ ಬಿಡುಗಡೆ ಮಾಡಿರುವ ಡೈರಿ ವಿಚಾರವನ್ನು ನಾನು ಗಂಭೀರವಾಗಿ ಪರಿಗಣಿಸಿದ್ದೇನೆ ಎಂದು ಲೆಹರ್ ಸಿಂಗ್ ಹೇಳಿದರು.

ಆಡ್ವಾನಿಯವರಿಗೆ ಲೆಹರ್ ಸಿಂಗ್ ಪತ್ರ ಬರೆದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅಡ್ವಾಣಿಯವರು ನನ್ನ ತಂದೆ ಸಮಾನ, 4 ವರ್ಷದ ಬಳಿಕ ದಿನೇಶ್ ಗುಂಡೂರಾವ್ ಗೆ ನಾನು ಬರೆದ ಲೆಟರ್ ನೆನಪಾಗಿದೆ. ಲೆಟರ್ ಬಗ್ಗೆ ನಾನು ಮಾತಾಡಲ್ಲ, ನಮ್ಮ ಮನೆ ವಿಚಾರ ನಾನು ಬಹಿರಂಗ ಪಡಿಸಲ್ಲ ಅಂತಾ ಉತ್ತರ ನೀಡದೇ ಲೆಹರ್ ಸಿಂಗ್ ಜಾರಿಕೊಂಡ್ರು.

ಯಡಿಯೂರಪ್ಪ ಭ್ರಷ್ಟ ಅನ್ನೋದಾದ್ರೆ ಅವರ ನೀಡುವ ದುಡ್ಡು ನಿಮಗ್ಯಾಕೆ ಎಂದು ಪ್ರಶ್ನಿಸಿ ಅಡ್ವಾಣಿಯವರಿಗೆ ಲೆಹರ್‍ಸಿಂಗ್ ಬರೆದಿದ್ದ ಪತ್ರವನ್ನು ನಿನ್ನೆ ಕಾಂಗ್ರೆಸ್ ನಾಯಕರು ಬಿಡುಗಡೆ ಮಾಡಿದ್ರು. ಆ ಬಗ್ಗೆ ಪ್ರತಿಕ್ರಿಯಿಸಿ, ನಾನು ಹಂಗೆ ಪತ್ರ ಬರದೇ ಇಲ್ಲ ಎಂದು ಹೇಳಿದ್ರು.

Comments

Leave a Reply

Your email address will not be published. Required fields are marked *