ದೆಹಲಿ ವಿಧಾನಸಭಾ ಚುನಾವಣೆ – ಇಂದು ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ

ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಗೆ ಇಂದು ಬಿಜೆಪಿ ಮತ್ತು ಕಾಂಗ್ರೆಸ್ ತನ್ನ ಹುರಿಯಾಳುಗಳನ್ನು ಚುನಾವಣಾ ಅಖಾಡಕ್ಕೆ ಇಳಿಸಲಿದೆ. ಆಮ್ ಆದ್ಮಿ 70 ವಿಧಾನಸಭೆ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಿದ ಬಳಿಕ ಬಿಜೆಪಿ, ಕಾಂಗ್ರೆಸ್ ಇಂದು ತನ್ನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡುವ ಸಾಧ್ಯತೆ ಇದೆ.

ಗುರುವಾರ ಬಿಜೆಪಿ ಮತ್ತು ಕಾಂಗ್ರೆಸ್ ತನ್ನ ಪಕ್ಷದ ಕೇಂದ್ರ ಕಚೇರಿಗಳಲ್ಲಿ ಕೇಂದ್ರ ಚುನಾವಣಾ ಸಮಿತಿ ಸಭೆ ನಡೆಸಿ ಅಭ್ಯರ್ಥಿಗಳ ಆಯ್ಕೆ ಸಂಬಂಧ ಸುದೀರ್ಘ ಚರ್ಚೆ ಮಾಡಿವೆ.

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ, ಸಿಎಂ ಅರವಿಂದ್ ಕೇಜ್ರಿವಾಲ್ ಸ್ಪರ್ಧಿಸುವ ನವದೆಹಲಿ ಕ್ಷೇತ್ರವನ್ನು ಹೊರತುಪಡಿಸಿ ಬಾಕಿ 69 ಕ್ಷೇತ್ರಗಳ ಬಗ್ಗೆ ಚರ್ಚೆ ನಡೆಸಿದ್ದು, ಬಹುತೇಕ ಹೊಸ ಮುಖಗಳಿಗೆ ಆದ್ಯತೆ ನೀಡಲಿದೆ ಎನ್ನಲಾಗಿದೆ. ದೆಹಲಿ ಕಾಂಗ್ರೆಸ್ ಅಧ್ಯಕ್ಷ ಸುಭಾಶ್ ಚೋಪ್ರಾ ಚುನಾವಣೆಗೆ ಸ್ಪರ್ಧಿಸದೆ ಚುನಾವಣಾ ಉಸ್ತುವಾರಿ ವಹಿಸಿಕೊಳ್ಳಲು ಮುಂದಾಗಿದ್ದಾರೆ.

ಇತ್ತ ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧ ಅರವಿಂದ ಲವ್ಲಿ ಅವರನ್ನ ಕಣಕ್ಕೆ ಇಳಿಸುವ ಮಾತುಗಳು ಕೇಳಿ ಬಂದಿದ್ದು, ಹಿರಿಯ ನಾಯಕ ಅಜೇಯ್ ಮಕೇನ್ ಚುನಾವಣಾ ಕಣದಿಂದ ಈ ಬಾರಿ ಹಿಂದೆ ಸರಿದಿದ್ದಾರೆ ಎನ್ನಲಾಗುತ್ತಿದೆ. ಪುತ್ರಿ ಅನಾರೋಗ್ಯ ಹಿನ್ನೆಲೆ ಚುನಾವಣೆಗೆ ಸ್ವರ್ಧಿಸದಿರಲು ಅವರು ತಿರ್ಮಾನಿಸಿದ್ದಾರೆ ಎಂದು ಕಾಂಗ್ರೆಸ್ ಮೂಲಗಳು ಹೇಳಿವೆ. ಅಲ್ಲದೆ ಆರ್‌ಜೆಡಿ ಜೊತೆಗೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದ್ದು, ನಾಲ್ಕು ಸೀಟುಗಳನ್ನು ಬಿಟ್ಟುಕೊಡಲು ಕಾಂಗ್ರೆಸ್ ತಿರ್ಮಾನಿಸಿದೆ.

ಬಿಜೆಪಿ ಕೂಡ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನೇತೃತ್ವದಲ್ಲಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಿದೆ. ಕಳೆದ ಬಾರಿ ಅತಿ ಹೆಚ್ಚು ಮತಗಳನ್ನ ಪಡೆದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

Comments

Leave a Reply

Your email address will not be published. Required fields are marked *