ಕಾಂಗ್ರೆಸ್‍ಗೆ ಮತ್ತೊಂದು ಶಾಕ್ ನೀಡಲು ಬಿಎಸ್‍ವೈ ಸಿದ್ಧತೆ!

ಬೆಂಗಳೂರು: ಫೋನ್ ಟ್ಯಾಪಿಂಗ್ ಪ್ರಕರಣವನ್ನು ಸಿಬಿಐಗೆ ಒಪ್ಪಿಸಿದ ಬೆನ್ನಲ್ಲೇ ಕಾಂಗ್ರೆಸ್‍ಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಮತ್ತೊಂದು ಶಾಕ್ ಕೊಟ್ಟಿದ್ದಾರೆ.

ಕಾಂಗ್ರೆಸ್ ಅವಧಿಯಲ್ಲಿ ನಡೆದಿದ್ದ ವೈಟ್ ಟ್ಯಾಪಿಂಗ್ ಅಕ್ರಮದ ತನಿಖೆಗೆ ಸಿಎಂ ಯಡಿಯೂರಪ್ಪ ಆದೇಶಿಸಿದ್ದಾರೆ. ಸಮಗ್ರ ತನಿಖೆ ಮಾಡಿ ವರದಿ ನೀಡುವಂತೆ ನಗರಾಭಿವೃದ್ಧಿ ಇಲಾಖೆಯ ಅಪರ ಕಾರ್ಯದರ್ಶಿಗಳಿಗೆ ಪತ್ರದ ಮೂಲಕ ಖಡಕ್ ಆದೇಶ ಕೊಟ್ಟಿದ್ದಾರೆ.

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ ಟೆಂಡರ್ ಶ್ಯೂರ್ ಹಾಗೂ ವೈಟ್ ಟ್ಯಾಪಿಂಗ್‍ನಲ್ಲಿ 2 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಅಕ್ರಮ ಆಗಿದೆ ಎನ್ನುವ ಆರೋಪ ಕೇಳಿ ಬಂದಿತ್ತು.  1 ಕಿ.ಮೀಗೆ 11 ಕೋಟಿ ರೂ.ಯೋಜನೆಯಲ್ಲಿ ರಸ್ತೆ ನಿರ್ಮಾಣಗೊಂಡ ಹಿನ್ನೆಲೆಯಲ್ಲಿ ವೈಟ್ ಟಾಪಿಂಗ್‍ನ 1 ಮತ್ತು 2 ನೇ ಹಂತದ ಕಾಮಗಾರಿ ತನಿಖೆ ಆಗಲಿದೆ. ಜೊತೆಗೆ ಮೂರನೇ ಹಂತದ ಕಾಮಗಾರಿಯನ್ನು ತಕ್ಷಣವೇ ತಡೆ ಹಿಡಿಯಲು ಸಿಎಂ ಸೂಚಿಸಿದ್ದಾರೆ.

2016-17ನೇ ಸಾಲಿನ ಮೊಲದ ಹಂತದ ಕಾಮಗಾರಿಯ ಸುಮಾರು 29 ರಸ್ತೆಗಳ, 93.47 ಕಿಲೋಮೀಟರ್ ಉದ್ದದ ರಸ್ತೆಯ 800 ಕೋಟಿ ಮೊತ್ತದ ಕಾಮಗಾರಿ,  2017-18ನೇ ಸಾಲಿನ ಎರಡನೇ ಹಂತದ ಕಾಮಗಾರಿಯ 41 ರಸ್ತೆಗಳು. 63.26 ಕಿಲೋಮೀಟರ್ ರಸ್ತೆ, 690 ಕೋಟಿ ವೆಚ್ಚದ ಕಾಮಗಾರಿಯ ತನಿಖೆ ನಡೆಯಲಿದೆ. ಅದೇ ರೀತಿ ಟೆಂಡರ್ ಶ್ಯೂರ್ 25 ರಸ್ತೆಗಳ, 36 ಕಿಲೋಮೀಟರ್ ಉದ್ದದ ರಸ್ತೆಯ 643 ಕೋಟಿ ಕಾಮಗಾರಿಯ ತನಿಖೆಗೆ ಸಿಎಂ ಆದೇಶಿಸಿದ್ದಾರೆ.

ಒಟ್ಟು ಮೂರು ಕಾಮಗಾರಿಗಳ ತನಿಖೆಗೆ ಆದೇಶಿದ್ದು, ಮೂರನೇ ಹಂತದ ವೈಟ್ ಟ್ಯಾಪಿಂಗ್ ಕಾಮಗಾರಿ ಸ್ಥಗಿತ ಮಾಡುವಂತೆ ಸಿಎಂ ಸೂಚಿದ್ದಾರೆ. ಒಂದು ವೇಳೆ ತನಿಖೆಯಲ್ಲಿ ಅಕ್ರಮ ಸಾಬೀತಾದರೆ ಅಂದಿನ ಸಚಿವರಾದ ಕೆ.ಜೆ.ಜಾರ್ಜ್, ಪರಮೇಶ್ವರ್ ಸೇರಿದಂತೆ ಅನೇಕ ಜನರು ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂದು ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ಬಿಜೆಪಿ ನಾಯಕರ ಫೋನ್ ಕರೆಯನ್ನು ಕದ್ದಾಲಿಸಿದ್ದಾರೆ ಎನ್ನುವ ಆರೋಪದ ಬೆನ್ನಲ್ಲೇ ಸರ್ಕಾರ ಈಗ ಎಚ್‍ಡಿಕೆಯನ್ನು ಕಟ್ಟಿ ಹಾಕಲು ಮುಂದಾಗಿದೆ. ಮೊದಲನೆಯದಾಗಿ ಜಂತಕಲ್ ಮೈನಿಂಗ್ ಪ್ರಕರಣದ ತನಿಖೆಯನ್ನು ಕಳೆದ 4 ವರ್ಷಗಳಿಂದ ವಿಶೇಷ ತನಿಖಾ ತಂಡ ನಡೆಸಿಕೊಂಡು ಬರುತ್ತಿದೆ. ತನಿಖೆ ನಡೆದು 1.5 ವರ್ಷವಾದರೂ ಇನ್ನೂ ಚಾರ್ಜ್ ಶೀಟ್ ಸಲ್ಲಿಸಿಲ್ಲ. ಈಗ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಲು ಎಸ್‍ಐಟಿ ಸಿದ್ಧತೆ ನಡೆಸುತ್ತಿದೆ.

ಐಎಂಎ ವಂಚಕ ಮನ್ಸೂರ್ ಜೊತೆ ಎಚ್‍ಡಿ ಕುಮಾರಸ್ವಾಮಿ ಗುರುತಿಸಿಕೊಂಡಿದ್ದರು. ಮನ್ಸೂರ್ ಜೊತೆ ಕುಮಾರಸ್ವಾಮಿ ಹಣವನ್ನು ಪಡೆದುಕೊಂಡಿದ್ದಾರೆ ಎನ್ನುವ ಆರೋಪ ಈಗಾಗಲೇ ಕೇಳಿ ಬಂದಿದೆ. ಒಂದು ವೇಳೆ ಕೋರ್ಟ್ ವಿಚಾರಣೆಯ ವೇಳೆ ಮನ್ಸೂರ್ ಖಾನ್ ಕುಮಾರಸ್ವಾಮಿ ಅವರಿಗೂ ನಾನು ಹಣವನ್ನು ನೀಡಿದ್ದೇನೆ ಎಂದು ಬಾಯಿಬಿಟ್ಟರೆ ಈ ಪ್ರಕರಣವನ್ನೂ ಸಿಬಿಐಗೆ ನೀಡುವ ಸಾಧ್ಯತೆಯಿದೆ.

Comments

Leave a Reply

Your email address will not be published. Required fields are marked *