ನೋಟ್ ಬ್ಯಾನ್ ವೇಳೆ ಕೂಡಿಟ್ಟ ಹಣದಿಂದ ಬಿಜೆಪಿ ಆಪರೇಷನ್ : ದಿಗ್ವಿಜಯ್ ಸಿಂಗ್

ಮುಂಬೈ: ನೋಟ್ ಬ್ಯಾನ್ ಸಂದರ್ಭದಲ್ಲಿ ಕೂಡಿಟ್ಟ ಕೋಟ್ಯಂತರ ಹಣವನ್ನು ಇದೀಗ ವಿರೋಧ ಪಕ್ಷದ ಶಾಸಕರನ್ನು ಖರೀದಿಸಲು ಬಿಜೆಪಿ ಬಳಸುತ್ತಿದೆ ಎಂದು ಕಾಂಗ್ರೆಸ್‍ನ ಹಿರಿಯ ಮುಖಂಡ ದಿಗ್ವಿಜಯ್ ಸಿಂಗ್ ಆರೋಪಿಸಿದ್ದಾರೆ.

ಡಿ.ಕೆ.ಶಿವಕುಮಾರ್ ಅವರು ಮುಂಬೈನಲ್ಲಿದ್ದ ತಮ್ಮ ಸ್ನೇಹಿತ(ರೆಬೆಲ್ ಶಾಸಕ)ರನ್ನು ಭೇಟಿಯಾಗಲು ಬಂದಾಗ ಪೊಲೀಸರು ಹೋಟೆಲ್ ಒಳಗಡೆ ಪ್ರವೇಶಿಸಲು ನಿರಾಕರಿಸಿದರು. ಶಾಸಕರೂ ಸಹ ಅವರ ಕರೆ ಸ್ವೀಕರಿಸಿರಲಿಲ್ಲ. ಹೀಗಾಗಿ ಡಿ.ಕೆ.ಶಿವಕುಮಾರ್ ಹೋಟೆಲ್ ಪ್ರವೇಶಿಸಲು ಯತ್ನಿಸಿದ್ದರು. ಆದರೆ, ಪೊಲೀಸರು ಅವರನ್ನು ತಡೆದರು ಎಂದು ಡಿಕೆಶಿ ಪ್ರಕರಣವನ್ನು ದಿಗ್ವಿಜಯ್ ಸಿಂಗ್ ಪ್ರಸ್ತಾಪಿಸಿ, ಬಿಜೆಪಿ ಆಪರೇಷನ್ ಕಮಲದ ವಿರುದ್ಧ ಹರಿಹಾಯ್ದರು.

ಇದೇ ವೇಳೆ ಮಧ್ಯಪ್ರದೇಶದ ಕಮಲ್‍ನಾಥ್ ಅವರ ಮೈತ್ರಿ ಸರ್ಕಾರದ ಕುರಿತು ಪ್ರತಿಕ್ರಿಯಿಸಿದ ಅವರು, ವಧ್ಯಪ್ರದೇಶದ ಸರ್ಕಾರ ಸುರಕ್ಷಿತವಾಗಿದೆ. ಮುಖ್ಯಮಂತ್ರಿ ಕಮಲ್‍ನಾಥ್ ಅವರು 121 ಶಾಸಕರನ್ನೂ ವಿಶ್ವಾಸಕ್ಕೆ ತೆಗೆದುಕೊಂಡಿದ್ದಾರೆ. ಬಿಜೆಪಿ ಸರ್ಕಾರ ಬೀಳಿಸಲು ಇಲ್ಲ ಸಲ್ಲದ ಆರೋಪಗಳನ್ನು ಮಾಡುತ್ತಿದೆ. ಮಧ್ಯಪ್ರದೇಶ ಸರ್ಕಾರ ಬೀಳುತ್ತದೆ ಎಂಬುದು ಕೇವಲ ವದಂತಿ. ಸರ್ಕಾರ ಸುಭದ್ರವಾಗಿದೆ ಎಂದು ಭರವಸೆ ವ್ಯಕ್ತಪಡಿಸಿದರು.

ಡಿಕೆಶಿ ಮುಂಬೈ ಹೈಡ್ರಾಮಾ
ಡಿ.ಕೆ.ಶಿವಕುಮಾರ್ ಅವರು ಅತೃಪ್ತ ಶಾಸಕರನ್ನು ಭೇಟಿ ಮಾಡಲು ತೆರಳಿದಾಗ ಮುಂಬೈ ಪೊಲೀಸರು ವಶಕ್ಕೆ ಪಡೆದು ಸಂಜೆ ಹೊತ್ತಿಗೆ ವಾಪಸ್ ಕಳುಹಿಸಿದ್ದರು. ಹೋಟೆಲ್ ಒಳಗಡೆ ಹೋಗಲು ಪೊಲೀಸರು ನಿರಾಕರಿಸುತ್ತಿದ್ದಂತೆಯೇ ಡಿಕೆಶಿ ಹಾಗೂ ಪೊಲೀಸರ ಮಧ್ಯೆ ಮಾತಿನ ಚಕಮಕಿ ನಡೆದಿತ್ತು. ನಿನ್ನೆ ಬಿಜೆಪಿಯವರನ್ನು ಬಿಟ್ಟಿದ್ದೀರಿ, ಇವತ್ತು ನಮ್ಮವರನ್ನು ಭೇಟಿ ಮಾಡಲು ಯಾಕೆ ಅವಕಾಶ ನೀಡುತ್ತಿಲ್ಲ ಎಂದು ಡಿಕೆಶಿ ಪ್ರಶ್ನಿಸಿದ್ದರು. ಹೀಗಾಗಿ ಇಬ್ಬರು ಮುಖಂಡರೊಂದಿಗೆ ಡಿಕೆಶಿ ಹೋಟೆಲ್ ಹೊರಗಡೆಯೇ ಕಾದು ಕುಳಿತಿದ್ದರು. ಕೊನೆಗೆ ಹೋಟೆಲ್ ಸಿಬ್ಬಂದಿ ಡಿಕೆ ಶಿವಕುಮಾರ್ ಹಠಕ್ಕೆ ಮಣಿದು ಶಾಸಕರು ತಂಗಿರುವ ಬಿಲ್ಡಿಂಗ್ ಬಿಟ್ಟು ಬೇರೆ ಬಿಲ್ಡಿಂಗ್‍ನಲ್ಲಿ ರೂಮ್ ಕೊಡಲು ನಿರ್ಧಾರ ಮಾಡಿದ್ದರು. ಆದರೆ, ಪಟ್ಟು ಬಿಡದ ಶಿವಕುಮಾರ್ ಶಾಸಕರು ತಂಗಿರುವ ಬಿಲ್ಡಿಂಗ್‍ನಲ್ಲೇ ರೂಮ್ ನೀಡುವಂತೆ ಹಠ ಹಿಡಿದಿದ್ದರು. ನಿಷೇಧಾಜ್ಞೆ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಪೊಲೀಸರು ಡಿಕೆಶಿವಕುಮಾರ್ ಅವರನ್ನು ವಶಕ್ಕೆ ಪಡೆದು ಸಂಜೆ ವೇಳೆಗೆ ಬಿಡುಗಡೆ ಮಾಡಿದ್ದರು.

Comments

Leave a Reply

Your email address will not be published. Required fields are marked *