ಚಿಕ್ಕಬಳ್ಳಾಪುರ: ಬಿಜೆಪಿಯವರು ಬಿಜೆಪಿಯವರನ್ನೇ ಆಪರೇಷನ್ ಮಾಡಿಕೊಳ್ಳಬೇಕು. ಬಿಜೆಪಿಯವರ ಮೆಂಟಲ್ ಪರಿಸ್ಥಿತಿ ಸರಿ ಇಲ್ಲ. ನ್ಯೂರೋಸರ್ಜನ್ ಬಳಿ ಕನ್ಸಲ್ಟ್ ಮಾಡಿಕೊಳ್ಳಬೇಕಾದ ಅವಶ್ಯಕತೆ ಬಿಜೆಪಿಯವರಿಗಿದೆ ಅಂತ ಚಿಕ್ಕಬಳ್ಳಾಪುರ ಸಂಸದ ವೀರಪ್ಪ ಮೊಯ್ಲಿ ಹೇಳಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯಲ್ಲಿ ಐಸಿಯು ಘಟಕ ಉದ್ಘಾಟಿಸಿ ಮಾತನಾಡಿದ ಮೊಯ್ಲಿ ಅವರು ಸದ್ಯದ ರಾಜ್ಯ ರಾಜಕಾರಣ ಬೆಳವಣಿಗೆ ಸಂಬಂಧದ ಬಗ್ಗೆ ಪ್ರತಿಕ್ರಿಯಿಸಿ, ಬಿಜೆಪಿಯವರು ಮೀನು ಹಿಡಿಯಲಿಕ್ಕೆ ಗಾಳ ಹಾಕುತ್ತಲೇ ಇದ್ದಾರೆ. ಒಂದೊಂದು ಕಡೆ ಗಾಳ ಹಾಕುತ್ತಾನೆ ಇದ್ದಾರೆ. ಆದರೆ ಬಿಜೆಪಿಯವರ ಗಾಳಕ್ಕೆ ಮೀನುಗಳೇ ಸಿಗುತ್ತಿಲ್ಲ ಎಂದರು.

ಅಲ್ಲದೇ ಈಗ ಸಂಕಾಂತ್ರಿ ಶುಭಾಶಯ ಹೇಳುವಾಗ ಅವರಿಗೂ ಕೂಡ ಸಂಕ್ರಾಂತಿಗೆ ಈ ಸರ್ಕಾರ ಸುಭದ್ರವಾಗಿರುತ್ತದೆ ಎಂದು ಹೇಳುತ್ತೇನೆ. ಸಂಕ್ರಾಂತಿ ನಂತರವೂ 5 ವರ್ಷ ಸಮ್ಮಿಶ್ರ ಸರ್ಕಾರ ಸುಭದ್ರವಾಗಿರುತ್ತೆ. ಆದರೆ ಸಮ್ಮಿಶ್ರ ಸರ್ಕಾರ ಅಲುಗಾಡಿಸುವ ಪ್ರಯತ್ನ ಮಾಡಿದರೆ, ಅದು ಅವರಿಗೆ ಅಘಾತವಾಗಲಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಅಲ್ಲದೇ ಸಿಎಂ ಕುಮಾರಸ್ವಾಮಿ ಅವರನ್ನು ಕಾಂಗ್ರೆಸ್ ಕ್ಲರ್ಕ್ ನಂತೆ ನಡೆಸಿಕೊಳ್ಳುತ್ತಿದೆ ಎಂಬ ಮೋದಿ ಅವರ ಹೇಳಿಕೆಗೆ ವೀರಪ್ಪ ಮೊಯ್ಲಿ ಅವರು, “ಪ್ರಧಾನಿ ಆಗಿದ್ದವರು ಒಬ್ಬ ಮುಖ್ಯಮಂತ್ರಿ ಮೇಲೆ ಆ ರೀತಿ ಕಮೆಂಟ್ ಮಾಡಿದ್ದರಿಂದ ಇದು ವೈಯಕ್ತಿಕ ಟೀಕೆ ಆಗುವುದಿಲ್ಲ. ನಮ್ಮ ಸಂವಿಧಾನಕ್ಕೆ ಮಾಡಿದ ಟೀಕೆ ಇದು. ಪ್ರಧಾನಿ ಅವರು ಅಂತಹ ಟೀಕೆಯನ್ನು ಮುಖ್ಯಮಂತ್ರಿಗೆ ಮಾಡಿರುವುದು ಇಡೀ ರಾಜ್ಯಕ್ಕೆ ಅವಮಾನ. ಇದು ಕೇವಲ ಮುಖ್ಯಮಂತ್ರಿಗೆ ಅವಮಾನ ಅಲ್ಲ, ಇಡೀ ರಾಜ್ಯದ ಜನತೆಗೆ ಅವಮಾನ ಮಾಡಿದ್ದಾರೆ” ಎಂದು ಕಿಡಿಕಾರಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply