ಎಂ ಸ್ಯಾಂಡ್ ಡಂಪ್ ಮಾಡುವಾಗ ಲಾರಿಯಿಂದ ಹೊರಬಂತು ಶವ- ಚಿಕ್ಕಬಳ್ಳಾಪುರದಲ್ಲಿ ವಿಚಿತ್ರ ಆತ್ಮಹತ್ಯೆ ಪ್ರಕರಣ

ಚಿಕ್ಕಬಳ್ಳಾಪುರ: ಎಂ ಸ್ಯಾಂಡ್ ಮರಳು ಡಂಪ್ ಮಾಡುತ್ತಿದ್ದ ವೇಳೆ ಟಿಪ್ಪರ್ ಲಾರಿಯಿಂದ ಮೃತದೇಹವೊಂದು ಹೊರ ಬಂದಿರುವ ವಿಚಿತ್ರ ಘಟನೆ ಚಿಕ್ಕಬಳ್ಳಾಪುರ ನಗರ ಹೊರವಲಯದ ನಂದಿ ಕ್ರಾಸ್ ಬಳಿಯ ನಿರ್ಮಾಣ ಹಂತದ ಮೆಗಾ ಡೈರಿಯಲ್ಲಿ ನಡೆದಿದೆ.

ಮೆಗಾ ಡೈರಿ ಕಾಮಗಾರಿಗೆ ದೇವನಹಳ್ಳಿ ತಾಲೂಕಿನ ಮುದ್ದನಾಯಕನಹಳ್ಳಿ ಬಳಿಯ ಮಂಜುನಾಥ ಕ್ರಷರ್‍ನಿಂದ ಎಂ ಸ್ಯಾಂಡ್ ತುಂಬಿಕೊಂಡು ಟಿಪ್ಪರ್ ಲಾರಿ ಬಂದಿತ್ತು. ನಿರ್ಮಾಣ ಹಂತದ ಮೆಗಾ ಡೈರಿಯಲ್ಲಿ ಟಿಪ್ಪರ್ ನಿಂದ ಎಂ ಸ್ಯಾಂಡ್ ಡಂಪ್ ಮಾಡುತ್ತಿದ್ದ ವೇಳೆ ಏಕಾಏಕಿ ಮೃತದೇಹ ಹೊರಬಂದಿದೆ. ಇದನ್ನ ಕಂಡು ಅಲ್ಲಿದ್ದವರೆಲ್ಲಾ ಕಕ್ಕಾಬಿಕ್ಕಯಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಬಂದ ಚಿಕ್ಕಬಳ್ಳಾಪುರ ಪೊಲೀಸರು ಟಿಪ್ಪರ್ ಲಾರಿಯಿಂದ ಮೃತದೇಹವನ್ನ ಹೊರತೆಗೆದು ಪರಿಶೀಲನೆ ನಡೆಸಿದಾಗ ಇದರ ಹಿಂದಿನ ರಹಸ್ಯ ಬಯಲಾಗಿದೆ. ಮೃತ ವ್ಯಕ್ತಿಯ ಜೇಬಿನಲ್ಲಿ ಡೆತ್ ನೋಟ್ ಪತ್ತೆಯಾಗಿದೆ. ಪೊಲೀಸರನ್ನು ಉಲ್ಲೇಖಿಸಿ ಈ ಪತ್ರ ಬರೆದಿದ್ದು, ತನ್ನ ಹೆಸರು ಪ್ರಶಾಂತ್. ನಾನು ಸಾಯಲು ಕಾರಣ ನಾಗರತ್ನ, ನಾರಾಯಣ, ಗಾಯತ್ರಿ ಹಾಗೂ ಶಾರದ ಅಂತ ಡೆತ್‍ನೋಟ್ ನಲ್ಲಿ ಬರೆದಿದ್ದಾರೆ. ಇವರ ಕಿರುಕುಳವೇ ನನ್ನ ಸಾವಿಗೆ ಕಾರಣ. ಇವರನ್ನ ಕರೆಸಿ ವಿಚಾರಣೆ ನಡೆಸಿ, ಅವರನ್ನ ಬಿಡಬೇಡಿ ಅಂತ ಪೊಲೀಸರಿಗೆ ಮನವಿ ಮಾಡಿದ್ದಾರೆ.

ಆದರೆ ಡೆತ್‍ನೋಟ್‍ನಲ್ಲಿ ವಿಳಾಸ ಬರೆದಿಲ್ಲ. ಹೀಗಾಗಿ ಪೊಲೀಸರು ಮೃತ ವ್ಯಕ್ತಿಯ ವಿಳಾಸ ಪತ್ತೆ ಮಾಡಲು ಕಾರ್ಯನಿರತರಾಗಿದ್ದಾರೆ.

 

 

Comments

Leave a Reply

Your email address will not be published. Required fields are marked *