ಕಾಳಿ ನದಿಯಲ್ಲಿ ನೀರಿಲ್ಲ- ನೀರಿನ ದಾಹಕ್ಕೆ ಪ್ರಾಣ ಬಿಟ್ಟ ಕಾಡುಕೋಣ!

ಕಾರವಾರ: ಬಿರು ಬೇಸಿಗೆಯಿಂದಾಗಿ ಉತ್ತರ ಕನ್ನಡ ಜಿಲ್ಲೆಯ ಕಾಳಿ ನದಿ ನೀರು ಬತ್ತಿಹೋಗಿದ್ದು, ನೀರನ್ನರಸಿ ನದಿ ದಂಡೆಗೆ ಬಂದಿದ್ದ ಕಾಡುಕೋಣವು ನೀರು ಸಿಗದೇ ದಾಹದಿಂದ ಪ್ರಾಣ ಬಿಟ್ಟಿದೆ.

ಜಿಲ್ಲೆಯ ಜೋಯಿಡಾ ತಾಲೂಕಿನ ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಅಣಶಿ ವನ್ಯಜೀವಿ ವಲಯದ ಕಡಗರ್ಣಿಯಲ್ಲಿ ಈ ದುರ್ಘಟನೆ ನಡೆದಿದೆ. ಬಿಸಿಲಿನ ಝಳಕ್ಕೆ ನದಿಯಲ್ಲಿ ನೀರು ಬತ್ತಿಹೋಗಿದೆ. ನಾಡಿನಲ್ಲಿ ಮಾತ್ರವಲ್ಲದೆ ಕಾಡಿನಲ್ಲೂ ನೀರಿಗಾಗಿ ಹಾಹಾಕಾರ ಎದುರಾಗಿದೆ. ಈ ನಡುವೆ ತನ್ನ ದಾಹ ತೀರಿಸಿಕೊಳ್ಳಲು ಕಾಳಿ ನದಿ ದಂಡೆಗೆ ಕಾಡುಕೋಣವೊಂದು ನೀರು ಕುಡಿಯಲು ಬಂದಿತ್ತು. ಆದರೆ ನೀರು ಸಿಗದೇ ದಾಹದಿಂದ ನರಳಿ ಅರಣ್ಯದಲ್ಲಿಯೇ ಸಾವನ್ನಪ್ಪಿದೆ.

ಪ್ರಾಣಿಯ ಮೃತದೇಹವನ್ನು ಅರಣ್ಯ ಇಲಾಖೆ ಸಿಬ್ಬಂದಿ ಗಮನಿಸಿದ್ದು, ಹಿರಿಯ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ. ಬಳಿಕ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಆಗಮಿಸಿ ಕಾಡುಕೋಣದ ಮರಣೋತ್ತರ ಪರೀಕ್ಷೆ ನಡೆಸಿದ್ದು, ದಾಹದಿಂದ ದಣಿದು ಪ್ರಾಣಿ ಸಾವನ್ನಪ್ಪಿರುವ ಶಂಕೆ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಪ್ರಾಣಿಯ ಅಂತ್ಯಸಂಸ್ಕಾರವನ್ನು ಸ್ವತಃ ಸಿಬ್ಬಂದಿಯೇ ಸೇರಿಕೊಂಡು ಮಾಡಿದ್ದಾರೆ.

Comments

Leave a Reply

Your email address will not be published. Required fields are marked *