ರಂಗನತಿಟ್ಟಿಗೆ ತಟ್ಟಿದ ಕಾವೇರಿ ಮಹಾಪ್ರವಾಹ – 17 ದ್ವೀಪಗಳು ಸಂಪೂರ್ಣ ನಾಶ

ಮಂಡ್ಯ: ಪ್ರವಾಹದಿಂದ ಹಲವು ಮಂದಿ ತಮ್ಮ ಅಪಾರ ಪ್ರಮಾಣದ ಆಸ್ತಿಪಾಸ್ತಿಯ ಜೊತೆಗೆ ತಮ್ಮ ಬದುಕನ್ನು ಕೂಡ ಕಳೆದುಕೊಂಡಿದ್ದಾರೆ. ಈ ಪ್ರವಾಹದಿಂದ ಮನುಷ್ಯರು ಮಾತ್ರ ಬದುಕನ್ನು ಕಳೆದುಕೊಂಡಿಲ್ಲ ಮೂಕ ಪಕ್ಷಿಗಳು ತಮ್ಮ ಸಂತಾನದ ಜೊತೆಗೆ ತಮ್ಮ ಗೂಡನ್ನು ಕಳೆದುಕೊಂಡು ಪರದಾಡುತ್ತಿವೆ.

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ರಂಗನತಿಟ್ಟು ಪಕ್ಷಿಧಾಮ, ದೇಶ ಅಲ್ಲದೇ ವಿದೇಶಿ ಪಕ್ಷಿಗಳಿಗೂ ಆಶ್ರಯ ನೀಡುತ್ತಿರುವ ಸುಂದರವಾದ ತಾಣ. ಇಲ್ಲಿಗೆ ದೇಶಿ ಹಾಗೂ ವಿದೇಶಿ ಪಕ್ಷಿಗಳು ಬಂದು ತಮ್ಮ ಸಂತಾನವನ್ನು ವೃದ್ಧಿ ಮಾಡಿಕೊಳ್ಳುವುದರ ಜೊತೆಗೆ ತಮ್ಮ ಬದುಕನ್ನು ಕಟ್ಟಿಕೊಂಡು ತಮ್ಮ ತಮ್ಮ ಪ್ರದೇಶಗಳಿಗೆ ತೆರಳುತ್ತಿದ್ದವು. ಆದರೆ ಕಳೆದ 20 ದಿನಗಳ ಹಿಂದೆ ಬಂದ ಪ್ರವಾಹದಿಂದ ರಂಗನತಿಟ್ಟಿನಲ್ಲಿದ್ದ, 23 ಐಲ್ಯಾಂಡ್‍ಗಳ ಪೈಕಿ 17 ಐಲ್ಯಾಂಡ್‍ಗಳು ಸಂಪೂರ್ಣವಾಗಿ ನಾಶವಾಗಿವೆ. ಇದರಿಂದ ಐಲ್ಯಾಂಡ್‍ನಲ್ಲಿ ಗೂಡು ಕಟ್ಟಿಕೊಂಡು ವಾಸ ಮಾಡುತ್ತಿದ್ದ ಪಕ್ಷಿಗಳು ಗೂಡು ಸೇರಿದಂತೆ ಗೂಡಿನಲ್ಲಿದ್ದ ಮೊಟ್ಟೆ ಹಾಗೂ ಮರಿಗಳನ್ನು ಕಳೆದುಕೊಂಡು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.

ರಂಗನತಿಟ್ಟಿನಲ್ಲಿದ್ದ ಐಲ್ಯಾಂಡ್‍ಗಳಲ್ಲಿ ಪಕ್ಷಿಗಳ ಸಂತಾನೋತ್ಪತ್ತಿಗೆ ಬೇಕಾದ ಎಲ್ಲಾ ರೀತಿಯ ಸೌಲಭ್ಯವನ್ನು ಕೃತಕವಾಗಿ ಅರಣ್ಯ ಇಲಾಖೆ ನಿರ್ಮಾಣ ಮಾಡಿತ್ತು. ಆದರೆ 20 ದಿನಗಳ ಹಿಂದೆ ಕೆಆರ್‍ಎಸ್ ಜಲಾಶಯದಿಂದ ಒಂದೂವರೆ ಲಕ್ಷ ಕ್ಯೂಸೆಕ್‍ಗೂ ಅಧಿಕ ಪ್ರಮಾಣದಲ್ಲಿ ನೀರು ಬಿಟ್ಟಿದ್ದ ಪರಿಣಾಮ ಪ್ರವಾಹ ಬಂದು 17 ಐಲ್ಯಾಂಡ್‍ಗಳು ನಾಶವಾಗಿವೆ. ಇದರಿಂದ ಎರಡು ಕೋಟಿಗೂ ಅಧಿಕ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ. ಈ ಪ್ರವಾಹದಿಂದ ಆರ್ಥಿಕವಾಗಿ ನಷ್ಟವಲ್ಲ, ಪ್ರಕೃತಿಯ ಸೌಂದರ್ಯದ ಜೊತೆ ಪಕ್ಷಿಗಳ ಬದುಕು ಕೂಡ ಬೀದಿಗೆ ಬಿದ್ದಿದೆ. ಇದೀಗ ಆ ಇಲ್ಲಿರುವ ಪಕ್ಷಿಗಳು ತಮ್ಮ ಬದುಕು ಕಟ್ಟಿಕೊಳ್ಳಲು ಇದೀಗ ರಂಗನತಿಟ್ಟಿನಲ್ಲಿ ಪರದಾಡುತ್ತಿವೆ. ಇನ್ನೇನೂ ಎರಡು ತಿಂಗಳು ಕಳೆದರೆ ಇನ್ನೂ ಅಪಾರ ಪ್ರಮಾಣದಲ್ಲಿ ಪಕ್ಷಿಗಳು ಸಂತಾನೋತ್ಪತ್ತಿಗೆ ಬರಲಿವೆ. ಅಷ್ಟರಲ್ಲಿ ನಾಶವಾಗಿರುವ ಐಲ್ಯಾಂಡ್‍ಗಳ ದುರಸ್ಥಿ ಮಾಡಬೇಕು ಎನ್ನುವುದು ಪಕ್ಷಿ ಪ್ರೇಮಿಗಳ ಆಶಯವಾಗಿದೆ.

Comments

Leave a Reply

Your email address will not be published. Required fields are marked *