ತೆರೆ ಮೇಲೆ ಬರಲಿದೆ ಮಿಥಾಲಿರಾಜ್‍ರ ಜೀವನಾಧಾರಿತ ಚಿತ್ರ

ಮುಂಬೈ: ಇತ್ತಿಚೆಗೆ ಬಾಲಿವುಡ್‍ನಲ್ಲಿ ಜೀವನಾಧಾರಿತ ಚಿತ್ರಗಳು ಹೆಚ್ಚಾಗಿ ಬರುತ್ತಿದ್ದು ಕ್ರೀಡೆಯಲ್ಲಿ ಹೆಚ್ಚು ಸಾಧನೆ ಮಾಡಿದವರನ್ನು ತೆರೆ ಮೆಲೆ ತರುತ್ತಿರುವುದು ಹೆಚ್ಚಾಗಿದೆ. ಈ ಸಾಲಿಗೆ ಈಗ ಮಹಿಳಾ ಕ್ರಿಕೆಟ್ ತಂಡ ನಾಯಕಿ ಮಿಥಾಲಿ ರಾಜ್ ಸೆರಿಕೊಳ್ಳಲಿದ್ದಾರೆ ಎಂದು ವೈಕಾಮ್ 18 ಮೋಷನ್ ಚಿತ್ರ ನಿರ್ಮಾಣ ಸಂಸ್ಥೆ ಹೇಳಿಕೊಂಡಿದೆ.

ಮುಂಬೈನಲ್ಲಿ ಖಾಸಗಿ ಹೋಟೆಲ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ ವೈಕಾಮ್ 18 ಮೋಷನ್ ಚಿತ್ರ ನಿರ್ಮಾಣ ಸಂಸ್ಥೆ ಈ ಬಗ್ಗೆ ಹೇಳಿಕೊಂಡಿದ್ದು, ಧೋನಿ, ಮೇರಿಕೋಂ, ಸಚಿನ್, ಮಿಲ್ಕಾ ಸಿಂಗ್‍ರಂತಹ ಕ್ರೀಡೆಯಲ್ಲಿ ಹೆಚ್ಚು ಸಾಧನೆ ಮಾಡಿದವರು ಈಗಾಗಲೇ ತೆರೆ ಮೇಲೆ ಬಂದು ಹೋಗಿದ್ದಾರೆ. ಈ ಪಟ್ಟಿಯಲ್ಲಿ ಮಿಥಾಲಿ ರಾಜ್‍ರನ್ನು ಸೇರಿಸಲು ವೈಕಾಮ್ ಮೋಷನ್ ಚಿತ್ರ ಸಂಸ್ಥೆ ಮುಂದೆ ಬಂದಿದೆ ಎಂದು ಸಂಸ್ಥೆಯ ಸಿಒಒ ಅಜಿತ್ ಅಂಧರೆ ಹೇಳಿದ್ದಾರೆ.

ಈ ಬಗ್ಗೆ ಮಿಥಾಲಿ ರಾಜ್ ಮಾತನಾಡಿ, ನನ್ನ ಜೀವನವನ್ನು ತೆರೆ ಮೇಲೆ ನೋಡಲು ನಾನು ಕಾತುರಳಾಗಿದ್ದೇನೆ. ನನಗೆ ತುಂಬಾ ಖುಷಿಯಾಗುತ್ತಿದೆ. ನಿಜಕ್ಕೂ ಈ ಚಿತ್ರ ಯುವತಿಯರ ಮೇಲೆ ಉತ್ತಮ ಪರಿಣಾಮ ಬೀರಲಿದೆ. ದೇಶದಲ್ಲಿ ಅನೇಕ ಯುವತಿಯರಲ್ಲಿ ಪ್ರತಿಭೆ ಇದ್ದರೂ ಸಹ ಹೊರ ಹಾಕಲು ಸಾಧ್ಯವಾಗುತ್ತಿಲ್ಲ. ಈ ಸಿನಿಮಾವನ್ನು ನೋಡಿದ ಪೋಷಕರು ಯುವತಿಯರಿಗೆ ಬೆಂಬಲ ನೀಡಬಹುದು ಎಂಬ ಆಶಾಭಾವನೆಯನ್ನು ವ್ಯಕ್ತಪಡಿಸಿದರು.

ಈ ಹಿಂದೆ ಬಾಲಿವುಡ್‍ನಲ್ಲಿ ಭಾಗ್ ಮಿಲ್ಕಾ ಭಾಗ್, ಕ್ವೀನ್, ದ ಮೌಂಟೆನ್ ಮ್ಯಾನ್, ದೃಶ್ಯಂ, ಮೇರಿ ಕೋಮ್, ಟಾಯ್ಲೆಟ್ ಎಕ್ ಪ್ರೇಮ್ ಕಥಾ ಚಿತ್ರದಂತಹ ಹಲವು ಸಿನಿಮಾಗಳನ್ನ ನಿರ್ಮಾಣ ಮಾಡಿದೆ. ನಮ್ಮ ಸಂಸ್ಥೆ ಯಾವಾಗಲೂ ಸಾಧನೆ ಮಾಡಿದ ಮಹಿಳೆಯರನ್ನ ಉದಾಹರಣೆಯಾಗಿರಿಸಿ ದೇಶದ ಮಹಿಳೆಯರಲ್ಲಿ ಜಾಗೃತಿ ಮೂಡಿಸಲು ಚಿತ್ರಗಳನ್ನು ಮಾಡುತ್ತೇವೆ. ಉದಾಹರಣೆಗೆ ಕಹಾನಿ, ಕ್ವೀನ್ ಚಿತ್ರಗಳೇ ಇದಕ್ಕೆ ಸಾಕ್ಷಿ ಎಂದರು.

ದೇಶದಲ್ಲಿ ಅನೇಕ ಮಹಿಳೆಯರಿಗೆ ಮಿಥಾಲಿ ರಾಜ್ ಸ್ಪೂರ್ತಿಯಾಗಿದ್ದಾರೆ. ಇವರ ಜೀವನ ಆಧಾರಿತ ಚಿತ್ರ ತೆರೆ ಮೇಲೆ ಬರುತ್ತಿರುವುದರಿಂದ ಅವರ ಕಷ್ಟ ನೋವುಗಳೆನು? ಅವರ ಸಾಧನೆ ಏನು ಎನ್ನುವುದು ತಿಳಿಯುತ್ತದೆ ಎಂದು ನಿರ್ದೇಶಕ ವರುಣ್ ಚೋಪ್ರಾ ಹೇಳಿದ್ದಾರೆ.

ಮಿಥಾಲಿ ರಾಜ್ ಅಂತಾರಾಷ್ಟ್ರೀಯಾ ಮಹಿಳಾ ಕ್ರಿಕೆಟ್ ನಲ್ಲಿ ಅತ್ಯಧಿಕ ರನ್ ಗಳಿಸಿದ ಆಟಗಾರ್ತಿಯಾಗಿದ್ದಾರೆ. 6000 ರನ್ ಹೊಡೆದಿರುವ ಮಿಥಾಲಿ 2005 ಮತ್ತು 2017 ವಿಶ್ವಕಪ್‍ನಲ್ಲಿ ಫೈನಲ್‍ಗೆ ಟೀಂ ಇಂಡಿಯಾವನ್ನು ಮುನ್ನಡೆಸಿದ್ದರು. ಅಲ್ಲದೇ ಮಿಥಾಲಿಗೆ ಅರ್ಜುನ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿ ಲಭಿಸಿದೆ.

Comments

Leave a Reply

Your email address will not be published. Required fields are marked *