ಕೋಲಾರದಲ್ಲಿ ಅಕಾಲಿಕ ಮಳೆ – ಬೈಕ್ ಸಮೇತ ಕೊಚ್ಚಿಹೋದ ಯುವಕ

ಕೋಲಾರ: ಕಳೆದ ರಾತ್ರಿ ಸುರಿದ ಮಳೆಯ ನೀರಿನಲ್ಲಿ ಯುವಕ ಕೊಚ್ಚಿಹೋಗಿ ಸಾವನ್ನಪ್ಪಿದ್ದು, ಮತ್ತೊಬ್ಬರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಬಲಮಂದೆ ಗ್ರಾಮದಲ್ಲಿ ನಡೆದಿದೆ.

ಕಾಮಸಮುದ್ರ ಗ್ರಾಮದ ನಿವಾಸಿ 22 ವರ್ಷದ ಸುರೇಶ್ ಮೃತಪಟ್ಟಿರುವ ಯುವಕ. ಸುರೇಶ್ ಹಾಗೂ ಮಸ್ತಾನ್ ರಾತ್ರಿ ತಮ್ಮ ಗ್ರಾಮಕ್ಕೆ ಬೈಕ್‍ನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಈ ಘಟನೆ ಸಂಭವಿಸಿದೆ. ಸದ್ಯಕ್ಕೆ ಮಸ್ತಾನ್ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.

ಬಲಮಂದೆ ದೊಡ್ಡಕೆರೆ ಮಳೆಯಿಂದ ತುಂಬಿ ಕೋಡಿ ಹರಿಯುತ್ತಿತ್ತು. ಜೊತೆಗೆ ರಾತ್ರಿ ಸುರಿದ ಧಾರಾಕಾರ ಮಳೆಗೆ ಮತ್ತಷ್ಟು ನೀರಿನ ರಭಸ ಹೆಚ್ಚಾಗಿದೆ. ಸುರೇಶ್ ನೀರಿನಲ್ಲಿಯೇ ಬೈಕ್ ಚಾಲನೆ ಮಾಡಿದ ಪರಿಣಾಮ ರಸ್ತೆಯಲ್ಲಿ ಆಯತಪ್ಪಿ ಬಿದ್ದಿದ್ದಾರೆ. ನಂತರ ನೀರಿನ ರಭಸಕ್ಕೆ ಪಕ್ಕದಲ್ಲಿದ್ದ ಹಳ್ಳಕ್ಕೆ ಬಿದ್ದು, ಕೊಚ್ಚಿಹೋಗಿದ್ದಾರೆ. ನಂತರ ಮಸ್ತಾನ್ ಗಾಬರಿಗೊಂಡು ಗ್ರಾಮದವರಿಗೆ ವಿಷಯ ತಿಳಿಸಿದ್ದಾರೆ.

ಗ್ರಾಮಸ್ಥರೇ ತಕ್ಷಣ ಪೊಲಿಸರಿಗೆ ಮಾಹಿತಿ ನೀಡಿ ರಾತ್ರಿ ಇಡೀ ಶವಕ್ಕಾಗಿ ಶೋಧಕಾರ್ಯ ನಡೆಸಿದ್ದಾರೆ. ಮುಂಜಾನೆ ಸುರೇಶ್ ಶವ ಒಂದು ಗಿಡದ ಹತ್ತಿರ ಪತ್ತೆಯಾಗಿದೆ. ನಂತರ ಘಟನೆ ನಡೆದ ಸ್ಥಳಕ್ಕೆ ಕಾಮಸಮುದ್ರ ಪೊಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

 

Comments

Leave a Reply

Your email address will not be published. Required fields are marked *