ನಾಳೆ ಭಜರಂಗದಳದ ಬೈಕ್ ರ‍್ಯಾಲಿ – ವೀರಸೌಧ ಚಿತ್ರಗ್ಯಾಲರಿಗೆ ಪೊಲೀಸ್ ಬಂದೋಬಸ್ತ್

ಚಿಕ್ಕಬಳ್ಳಾಪುರ: ಕರ್ನಾಟಕ ಜಲಿಯನ್ ವಾಲಾಬಾಗ್ ಖ್ಯಾತಿಯ ವಿದುರಾಶ್ವತ್ಥ ಗ್ರಾಮಕ್ಕೆ ಸ್ವಾಂತಂತ್ರ‍್ಯದ ಅಮೃತ ಮಹೋತ್ಸವದ ಅಂಗವಾಗಿ ಹಿಂದೂಪರ ಸಂಘಟನೆಗಳು ಭಾನುವಾರ ಬೆಂಗಳೂರಿನ ಪ್ರೀಡಂ ಪಾರ್ಕ್ನಿಂದ ಬೃಹತ್ ಬೈಕ್ ರ‍್ಯಾಲಿಯನ್ನು ಹಮ್ಮಿಕೊಂಡಿವೆ. ಹಿಂದೂ ಪರ ಸಂಘಟನೆಗಳ ದಾಳಿ ಹಿನ್ನೆಲೆ ವೀರಸೌಧ ಗ್ಯಾಲರಿ ಸೇರಿದಂತೆ ಹಲವೆಡೆ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಭಜರಂಗದಳ ಸಂಘಟನೆಯ ರಾಷ್ಟ್ರೀಯ ಸಹ ಸಂಚಾಲಕ ಸೂರ್ಯನಾರಾಯಣ ನೇತೃತ್ವದಲ್ಲಿ ವಿದುರಾಶ್ವತ್ಥ ಗ್ರಾಮಕ್ಕೆ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಬರಲಿದ್ದು, ಹುತಾತ್ಮ ವೀರ ಯೋಧರ ಸ್ಮಾರಕ ಹಾಗೂ ಸ್ತೂಪಕ್ಕೆ ಪುಷ್ಪನಮನ ಸಲ್ಲಿಸಲಿದ್ದಾರೆ. ಈ ವೇಳೆ ಚಿತ್ರ ಗ್ಯಾಲರಿಗೆ ಭೇಟಿ ನೀಡುವ ಸಾಧ್ಯತೆ ಇದ್ದು, ವಿವಾದಿತ ಪೋಟೋಗಳ ಮೇಲೆ ದಾಳಿ ನಡೆಯುವ ಆತಂಕ ಉದ್ಭವವಾಗಿದೆ. ಈ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ವೀರಸೌಧದ ಚಿತ್ರ ಗ್ಯಾಲರಿಗೆ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ. ಇದನ್ನೂ ಓದಿ: ನಿಮ್ಮ ವರಿಷ್ಠೆಯ ಮೂಲ ಯಾವುದು?: ಸಿದ್ದರಾಮಯ್ಯಗೆ ಪ್ರತಾಪ್ ಸಿಂಹ ಸವಾಲ್

ಚಿತ್ರ ಗ್ಯಾಲರಿ ವಿವಾದವೇನು?
ವಿದುರಾಶ್ವತ್ಥ ಐತಿಹಾಸಿಕ ಪುರಾಣ ಪ್ರಸಿದ್ಧ ಪುಣ್ಯ ಕ್ಷೇತ್ರ, ಸ್ವಾತಂತ್ರ‍್ಯ ಸಂಗ್ರಾಮದ ಪುಣ್ಯ ಭೂಮಿಯೂ ಹೌದು. ಅಂತಹ ಕ್ಷೇತ್ರದಲ್ಲಿ ಒಂದು ಕಡೆ ವಿದುರ ಮಹರ್ಷಿ ನೆಟ್ಟ ಅಶ್ವತ್ಥ ವೃಕ್ಷದ ಕೆಳಗೆ ಅಶ್ವತ್ಥನಾರಾಯಣಸ್ವಾಮಿ ನೆಲೆ ನಿಂತಿದ್ದರೆ ಮತ್ತೊಂದೆಡೆ ಸ್ವಾತಂತ್ರ ಸಂಗ್ರಾಮದಲ್ಲಿ ಮಡಿದ ವೀರಯೋಧರ ಸ್ತೂಪವೂ ಇದೆ. ಅದೇ ಜಾಗದಲ್ಲಿ ಸ್ವಾತಂತ್ರ‍್ಯ ಸಂಗ್ರಾಮದ ಇತಿಹಾಸ ದರ್ಶನ ಮಾಡಿಸುವ ಚಿತ್ರ ಗ್ಯಾಲರಿಯೂ ಇದ್ದು, ಆ ಚಿತ್ರ ಗ್ಯಾಲರಿ ಕಳೆದ ಒಂದು ತಿಂಗಳಿನಿಂದ ವಿವಾದಿತ ಕೇಂದ್ರ ಬಿಂದುವಾಗಿದೆ.

ಚಿತ್ರ ಗ್ಯಾಲರಿಯಲ್ಲಿನ ಕೆಲ ಪೋಟೋಗಳಲ್ಲಿ ಹಿಂದೂ ಕೋಮುವಾದ, ಬಲ ಪಂಥೀಯ, ಮುಸ್ಲಿಂ ಕೋಮುವಾದ, ಮಹಾತ್ಮ ಗಾಂಧಿ ಹತ್ಯೆ ಮಾಡಿದವರು ಎಂದು ಹಲವು ಪೋಟೋಗಳ ಬಗ್ಗೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸಂದರ್ಶಕರ ಪುಸ್ತಕದಲ್ಲಿ ತಮ್ಮ ಅಭಿಪ್ರಾಯವನ್ನು ಬರೆದು, ಪೋಟೋಗಳ ಬದಲಾವಣೆಗೂ ಆಗ್ರಹಿಸಿದ್ದಾರೆ. ಹೀಗಾಗಿ ಕಳೆದ 1 ತಿಂಗಳಿನಿಂದ ವೀರಸೌಧದ ಚಿತ್ರ ಗ್ಯಾಲರಿಗೆ ಹಿಂದೂ ಸಂಘಟನೆಗಳ ಕಾರ್ಯಕರ್ತರು ದಾಳಿ ನಡೆಸುವ ಆತಂಕ ಇದೆ ಎಂದು ಸ್ವತಃ ಉಸ್ತುವಾರಿ ವಹಿಸಿದ್ದ ಸ್ವಾತಂತ್ರ‍್ಯ ಸ್ಮಾರಕ ಅಭಿವೃದ್ಧಿ ಸಮಿತಿ, ವೀರಸೌಧ ಚಿತ್ರ ಗ್ಯಾಲರಿಗೆ ಸೂಕ್ತ ಭದ್ರತೆ ನೀಡುವಂತೆ ಪೊಲೀಸ್ ಇಲಾಖೆಗೆ ಮನವಿ ಮಾಡಿದೆ. ಇದನ್ನೂ ಓದಿ: ದೇಶಕ್ಕೆ ಕನ್ನಡಿಗರ ಕೊಡುಗೆ ಅಪಾರ: ಬೊಮ್ಮಾಯಿ

ವೀರಸೌಧ ಚಿತ್ರ ಗ್ಯಾಲರಿಗೆ ಹಿಂದೆಂದೂ ಕಾಣದ ಪೊಲೀಸರನ್ನು ಇದೀಗ ನಿಯೋಜಿಸಿ, ಭದ್ರತೆ ವಹಿಸಲಾಗಿದೆ. ಭಾನುವಾರ ಸಾವಿರಾರು ಹಿಂದೂ ಪರ ಸಂಘಟನೆ ಕಾರ್ಯಕರ್ತರು ಆಗಮಿಸುವ ಸಾಧ್ಯತೆ ಇದ್ದು, ವೀರಸೌಧದ ಚಿತ್ರ ಗ್ಯಾಲರಿಗೆ ಎಲ್ಲಿಲ್ಲದ ಬಂದೋಬಸ್ತ್ ಮಾಡಲಾಗಿದೆ.

Comments

Leave a Reply

Your email address will not be published. Required fields are marked *