ದ್ವಿಚಕ್ರ ವಾಹನಕ್ಕೆ ಕ್ಯಾಂಟರ್ ಡಿಕ್ಕಿ – ಇಬ್ಬರು ಕಾಲೇಜು ವಿದ್ಯಾರ್ಥಿಗಳು ಧಾರುಣ ಸಾವು

ಆನೇಕಲ್: ದ್ವಿಚಕ್ರ ವಾಹನಕ್ಕೆ ಕ್ಯಾಂಟರ್ ಡಿಕ್ಕಿ ಹೊಡೆದ ಪರಿಣಾಮ ಬೈಕ್‍ನಲ್ಲಿ ಸಂಚರಿಸುತ್ತಿದ್ದ ಕಾಲೇಜು ವಿದ್ಯಾರ್ಥಿಗಳಿಬ್ಬರು ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಮೃತಪಟ್ಟಿರುವ ಘಟನೆ ಬನ್ನೇರುಘಟ್ಟ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಬನ್ನೇರುಘಟ್ಟದ ಕೆಂಪನಾಯಕನ ಅಕ್ವೇರಲ್ ಗಾರ್ಮೆಂಟ್ಸ್ ಬಳಿ ಕಳೆದ ರಾತ್ರಿ ಕ್ಯಾಂಟರ್ ಮತ್ತು ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಕಾಲೇಜು ವಿದ್ಯಾರ್ಥಿಗಳಿಬ್ಬರು ಮೃತಪಟ್ಟಿದ್ದಾರೆ. ಬೆಂಗಳೂರಿನ ಸಾರಕ್ಕಿ ನಿವಾಸಿಗಳಾದ ಕೌಶಿಕ್ (19) ಮತ್ತು ಸುಷ್ಮಾ (19) ಮೃತ ದುರ್ದೈವಿಗಳು. ಇವರಿಬ್ಬರೂ ಕೂಡ ಬನ್ನೇರುಘಟ್ಟದ ಎಂಎಂಸಿ ಕಾಲೇಜ್‌ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ನಿನ್ನೆ ಕಾಲೇಜ್ ಮುಗಿಸಿಕೊಂಡು ಬೈಕ್ ನಲ್ಲಿ ಹೋಗುವಾಗ ಹಿಂಬದಿಯಿಂದ ಬಂದ ಕ್ಯಾಂಟರ್ ಡಿಕ್ಕಿ ಹೊಡೆದಿದೆ. ಇದನ್ನೂ ಓದಿ: ಕೆಎಸ್‌ಆರ್‌ಟಿಸಿ ಬಸ್ ಬ್ರೇಕ್ ಫೇಲ್ – ಸರಣಿ ಅಪಘಾತ, ತಪ್ಪಿತು ದುರಂತ

ಅಪಘಾತದಲ್ಲಿ ಗಂಭೀರ ಗಾಯಗೊಂಡು ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಕೌಶಿಕ್ ಮತ್ತು ಸುಷ್ಮಾರನ್ನು ಸ್ಥಳೀಯರು ತಕ್ಷಣ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಇಬ್ಬರು ಕೊನೆಯುಸಿರೆಳೆದಿದ್ದಾರೆ. ಅಪಘಾತ ಸಂಭವಿಸುತ್ತಿದ್ದಂತೆ ಕ್ಯಾಂಟರ್ ಚಾಲಕ ಪರಾರಿಯಾಗಿದ್ದಾನೆ. ಅಪಘಾತದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಪ್ರಕರಣ ಸಂಬಂಧ ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇದನ್ನೂ ಓದಿ: ಸೂಪರ್ ಮಾರ್ಕೆಟ್‌ನಲ್ಲಿ ಕಳ್ಳತನ – ತಾಯಿ ಮಗಳ ಕೈ ಚಳಕ ಸಿಸಿಟಿವಿಯಲ್ಲಿ ಸೆರೆ

Comments

Leave a Reply

Your email address will not be published. Required fields are marked *