ದೆಹಲಿ ಚುನಾವಣೆ – ದಕ್ಷಿಣ ಭಾರತೀಯರ ಮತಗಳ ಮೇಲೆ ಬಿಜೆಪಿ ಕಣ್ಣು

ನವದೆಹಲಿ: ಇನ್ನೈದು ದಿನಗಳಲ್ಲಿ ದೆಹಲಿ ವಿಧಾನಸಭೆಗೆ ಮತದಾನ ನಡೆಯಲಿದೆ. ಈಗಾಗಲೇ ಬಿರುಸಿನ ಪ್ರಚಾರ ನಡೆಯುತ್ತಿದ್ದು, ಈ ಬಾರಿ ಕೆಲವು ಕಡೆ ನಿರ್ಣಾಯಕ ಪಾತ್ರ ವಹಿಸುವ ದಕ್ಷಿಣ ಭಾರತೀಯರ ಮತಗಳ ಮೇಲೆ ಬಿಜೆಪಿ ಕಣ್ಣಿಟ್ಟಿದೆ.

ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ ಹಾಗೂ ಮಹಾರಾಷ್ಟ್ರ ಮೂಲದ ಜನರು ದೆಹಲಿಯಲ್ಲಿ ವಾಸವಾಗಿರುವ ಪ್ರದೇಶಗಳನ್ನು ಗುರುತಿಸಿರುವ ಬಿಜೆಪಿ ದಕ್ಷಿಣ ಭಾರತದ ಪ್ರಮುಖ ನಾಯಕರಿಂದ ಪ್ರಚಾರ ನಡೆಸಲು ಮುಂದಾಗಿದೆ.

ಕೇಂದ್ರ ಸಚಿವರು ಸೇರಿ ಸುಮಾರು 300 ಮಂದಿ ಬಿಜೆಪಿ ಕಾರ್ಯಕರ್ತರು ಎಬಿವಿಪಿ, ಆರ್‌ಎಸ್‌ಎಸ್‌ನ ಸ್ವಯಂ ಸೇವಕರು ಚುನಾವಣಾ ಕಣದಲ್ಲಿ ಪ್ರಚಾರ ನಡೆಸಿದ್ದಾರೆ. ಒಟ್ಟು 70 ಕ್ಷೇತ್ರಗಳ ಪೈಕಿ 40 ಕ್ಷೇತ್ರಗಳನ್ನು ಗುರುತಿಸಿದ್ದು, ಪ್ರತಿ ಕ್ಷೇತ್ರಕ್ಕೆ 5-6 ಮಂದಿಯ ತಂಡ ರಚಿಸಲಾಗಿದೆ. ಈ ಗುಂಪುಗಳು ಮನೆ, ಮನೆಯನ್ನು ಸಂಪರ್ಕ ಮಾಡುವ ಮೂಲಕ ಮತಗಳನ್ನು ಬಿಜೆಪಿಯತ್ತ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ.

ಕರ್ನಾಟಕದಿಂದ 35 ಮಂದಿ ಕಾರ್ಯಕರ್ತರು ದೆಹಲಿಯಲ್ಲಿ ಪ್ರಚಾರ ನಡೆಸಿದ್ದು, ಕರ್ನಾಟಕದ ಮತಗಳನ್ನು ಸೆಳೆಯುತ್ತಿದ್ದಾರೆ. ರಾಜ್ಯ ಬಿಜೆಪಿ ಉಸ್ತುವಾರಿ ಮುರಳಿಧರ್ ರಾವ್ , ಕೇಂದ್ರ ಸಚಿವರಾದ ಡಿ.ವಿ ಸದಾನಂದಗೌಡ, ಪ್ರಹ್ಲಾದ್ ಜೋಶಿ, ಪ್ರತಾಪ್ ಸಿಂಹಾ, ಶೋಭಾ ಕರಂದ್ಲಾಜೆ ಸೇರಿ ಕೆಲ ಸಂಸದರ ಮೂಲಕ ದೆಹಲಿ ಕನ್ನಡಿಗರ ಮತ ಸೆಳೆಯುವ ಪ್ರಯತ್ನ ನಡೆಯುತ್ತಿದೆ. ಇಬ್ಬರು ಕೇಂದ್ರ ಸಚಿವರು, ದೆಹಲಿಯ ಕನ್ನಡಿಗರು ಸೇರಿ ಇತರೆ ರಾಜ್ಯದ ಕೆಲ ಸಂಘ ಸಂಸ್ಥೆಗಳ ಮುಖಂಡರ ಸಭೆ ನಡೆಸಿ ಬಿಜೆಪಿ ಬೆಂಬಲಿಸುವಂತೆ ಮನವಿ ಮಾಡಿದ್ದಾರೆ.

ಫೆಬ್ರವರಿ 5ರಂದು ದೆಹಲಿ ಕರ್ನಾಟಕ ಸಂಘದಲ್ಲಿ ಕಾರ್ಯಕ್ರಮವೊಂದನ್ನ ಬಿಜೆಪಿ ನಾಯಕ ವೆಂಕಟೇಶ್ ಮೌರ್ಯ ಆಯೋಜಿಸಿದ್ದು, ರಾಜ್ಯ ಬಿಜೆಪಿ ನಾಯಕರು ಭಾಗಿಯಾಗಲಿದ್ದಾರೆ. ಅಂದು ದೆಹಲಿ ಕನ್ನಡಗರನ್ನು ಪಕ್ಷದತ್ತ ಸೆಳೆಯುವ ಪ್ರಯತ್ನ ಬಿಜೆಪಿ ಮಾಡಲಿದೆ.

Comments

Leave a Reply

Your email address will not be published. Required fields are marked *