ಪಾಟ್ನಾ: ಬಿಹಾರ ಚುನಾವಣೆಗೆ ದಿನಗಳು ಹತ್ತಿರವಾಗುತ್ತಿದ್ದಂತೆ ಉಭಯ ಮೈತ್ರಿಕೂಟಗಳ ಪ್ರಚಾರದ ಬಿರುಸು ಜೋರಾಗುತ್ತಿದೆ. ಈಗಾಗಲೇ ಭರ್ಜರಿ ಪ್ರಚಾರ ಕಾರ್ಯ ಕೈಗೊಂಡಿರುವ ಎನ್‌ಡಿಎ ಮೈತ್ರಿಕೂಟ ಅ.31 ರಂದು ಪ್ರಣಾಳಿಕೆ ಬಿಡುಗಡೆ ಮಾಡಲಿದೆ.
ಬೆಳಗ್ಗೆ 9:30ರ ಸುಮಾರಿಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಮೈತ್ರಿಕೂಟದ ಎಲ್ಲಾ ನಾಯಕರ ಸಮ್ಮುಖದಲ್ಲಿ ಬಿಜೆಪಿ, ಜೆಡಿಯು, ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್), ಹಿಂದೂಸ್ತಾನಿ ಅವಾಮ್ ಮೋರ್ಚಾ (ಜಾತ್ಯತೀತ) ಮತ್ತು ರಾಷ್ಟ್ರೀಯ ಲೋಕ ಮೋರ್ಚಾ ಸೇರಿದಂತೆ ಎನ್‌ಡಿಎ ಮಿತ್ರಪಕ್ಷಗಳ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಲಾಗುತ್ತದೆ.
ಏನಿದೆ ನಿರೀಕ್ಷೆ?
ವರದಿಗಳ ಪ್ರಕಾರ, ಎನ್‌ಡಿಎ ಮೈತ್ರಿಕೂಟದ ಪ್ರಣಾಳಿಕೆಯು ಶಿಕ್ಷಣ, ಆರೋಗ್ಯ ರಕ್ಷಣೆ, ಕೃಷಿ, ಉದ್ಯೋಗ, ಮಹಿಳಾ ಸಬಲೀಕರಣ ಮೇಲೆ ಕೇಂದ್ರೀಕೃತವಾಗಿದೆ. ಅಲ್ಲದೇ ಮೂಲ ಸೌಕರ್ಯ, ಗ್ರಾಮೀಣ ಅಭಿವೃದ್ಧಿಗಳಿಗೂ ವಿಶೇಷ ಒತ್ತು ನೀಡಲಾಗಿದೆ ಎಂದು ಆಪ್ತ ಮೂಲಗಳು ತಿಳಿಸಿವೆ.
ಮಹಾಘಟಬಂಧನ್ ಭರವಸೆ ಏನಿದೆ?
ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಮತ್ತು ಕಾಂಗ್ರೆಸ್ ನೇತೃತ್ವದ ಮಹಾಘಟಬಂಧನ್ ಮೈತ್ರಿಕೂಟ ‘ಬಿಹಾರ ಕಾ ತೇಜಸ್ವಿ ಪ್ರಾಣ್’ ಎಂಬ ಶೀರ್ಷಿಕೆಯಡಿ ಈಗಾಗಲೇ ತನ್ನ ಪ್ರಣಾಳಿಕೆ ಬಿಡುಗಡೆ ಮಾಡಿದೆ.
* ಸರ್ಕಾರ ರಚಿಸಿದ 20 ದಿನಗಳಲ್ಲಿ ರಾಜ್ಯದ ಪ್ರತಿ ಕುಟುಂಬದ ಒಬ್ಬ ಸದಸ್ಯನಿಗೆ ಸರ್ಕಾರಿ ಉದ್ಯೋಗ.
* ‘ಮೈ-ಬೆಹಿಂ ಮಾನ್ ಯೋಜನೆ’ ಅಡಿಯಲ್ಲಿ, ಡಿಸೆಂಬರ್ 1 ರಿಂದಲೇ ಮಹಿಳೆಯರಿಗೆ ತಿಂಗಳಿಗೆ 2,500 ರೂ. ಆರ್ಥಿಕ ನೆರವು.
* ಹಳೆಯ ಪಿಂಚಣಿ ಯೋಜನೆ (ಒಪಿಎಸ್) ಜಾರಿಗೆ ತರುವ ಭರವಸೆ
* ವಕ್ಫ್ (ತಿದ್ದುಪಡಿ) ಕಾಯ್ದೆ ಕಸದ ಬುಟ್ಟಿಗೆ
* ಪಂಚಾಯಿತಿ ಪ್ರತಿನಿಧಿಗಳ ವಿಮೆ ಭತ್ಯೆ ಡಬಲ್ ಸೇರಿದಂತೆ ಹಲವು ಭರವಸೆಗಳನ್ನ ನೀಡಿದೆ.
ಇದೇ ನವೆಂಬರ್ 6 ಮತ್ತು 11 ರಂದು 2 ಹಂತಗಳಲ್ಲಿ ಮತದಾನ ನಡೆಯಲಿದ್ದು, ನ.14ರಂದು ಫಲಿತಾಂಶ ಪ್ರಕಟವಾಗಲಿದೆ.
