ಕಾಂಗ್ರೆಸ್‌ Vs ಆರ್‌ಜೆಡಿ Vs ಸಿಪಿಐ Vs ಜೆಎಂಎಂ ಮಧ್ಯೆ ಬಿಹಾರದಲ್ಲಿ ಕುಸ್ತಿ

– ಶಾಕ್‌ ನೀಡಿ ಮೈತ್ರಿ ಪರಿಶೀಲಿಸುವುದಾಗಿ ಹೇಳಿದ ಜೆಎಂಎಂ
– 9 ಕ್ಷೇತ್ರಗಳಲ್ಲಿ INDIA ಮಧ್ಯೆ ಫ್ರೆಂಡ್ಲಿ ಫೈಟ್‌

ನವದೆಹಲಿ: ಎನ್‌ಡಿಎ (NDA) ಸೋಲಿಸಲು ರಾಷ್ಟ್ರಮಟ್ಟದಲ್ಲಿ ಒಂದಾಗಿರುವ INDIA ಒಕ್ಕೂಟದಲ್ಲಿ ದೊಡ್ಡ ಬಿರುಕು ಮೂಡಿದೆ. ಬಿಹಾರ ವಿಧಾನಸಭಾ ಚುನಾವಣೆಯಲ್ಲಿ (Bihar Election) ಮೈತ್ರಿ ಪಕ್ಷಗಳು ಪರಸ್ಪರ ಸ್ಪರ್ಧೆಗೆ ಇಳಿದಿವೆ. ಅಷ್ಟೇ ಅಲ್ಲದೇ ಜಾರ್ಖಂಡ್‌ ಮುಕ್ತಿ ಮೋರ್ಚಾ (JMM) ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಘೋಷಣೆ ಮಾಡುವ ಮೂಲಕ ಮೈತ್ರಿಗೆ ಶಾಕ್‌ ನೀಡಿದೆ.

ಸೋಮವಾರ ಎರಡನೇ ಹಂತದ ಚುನಾವಣೆಯ ನಾಮಪತ್ರ ಸಲ್ಲಿಕೆಗೆ ಅಂತಿಮ ದಿನವಾಗಿತ್ತು. ಆದರೆ ಕೊನೆ ಹಂತದವರೆಗೂ ಮೈತ್ರಿಯಲ್ಲಿ ಸೀಟ್‌ ಹಂಚಿಕೆ ಮಾತುಕತೆ ಅಂತ್ಯವಾಗಿರಲಿಲ್ಲ. ಪರಿಣಾಮ ಆರ್‌ಜೆಡಿ ಯಾರ ಜೊತೆ ಚರ್ಚಿಸದೇ ಅಂತಿಮವಾಗಿ 143 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಇಳಿಸಿದರೆ ಕಾಂಗ್ರೆಸ್‌ 61, ಎಡ ಪಕ್ಷಗಳು 30, ವಿಐಪಿ 15 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ.

ಈ ಪೈಕಿ 9 ಕ್ಷೇತ್ರಗಳಲ್ಲಿ INDIA ಕೂಟದ ಮಧ್ಯೆಯೇ ಫ್ರೆಂಡ್ಲಿ ಫೈಟ್‌ ನಡೆಯಲಿದೆ. ಅದರಲ್ಲೂ ಕಾಂಗ್ರೆಸ್‌ ವಿರುದ್ಧವೇ ಅಭ್ಯರ್ಥಿಗಳನ್ನು ಪ್ರಕಟಿಸಿರುವುದು ವಿಶೇಷ. 6 ಕ್ಷೇತ್ರಗಳಲ್ಲಿ ಆರ್‌ಜೆಡಿ, 3 ಕ್ಷೇತ್ರಗಳಲ್ಲಿ ಸಿಪಿಐ ಕಣಕ್ಕೆ ಇಳಿದಿದೆ. ಇದನ್ನೂ ಓದಿ:  21 ವರ್ಷಗಳ ಹಿಂದಿನ ದರೋಡೆ ಕೇಸ್‌ – ನಾಮಪತ್ರ ಸಲ್ಲಿಸಿದ ಮರುಕ್ಷಣವೇ ಆರ್‌ಜೆಡಿ ಅಭ್ಯರ್ಥಿ ಅರೆಸ್ಟ್‌


ಕನಿಷ್ಟ 5 ಕ್ಷೇತ್ರಗಳಲ್ಲಿ ಜೆಎಂಎಂ ಸ್ಪರ್ಧಿಸುವ ಸಾಧ್ಯತೆಯಿದೆ ಎಂದು ವರದಿಯಾಗಿತ್ತು. ಆದರೆ INDIA ಒಕ್ಕೂಟದಲ್ಲಿ ಸರಿಯಾಗಿ ಸೀಟ್‌ ಹಂಚಿಕೆಯಾಗದ ಕಾರಣ ಚುನಾವಣಾ ಕಣದಿಂದ ಹಿಂದಕ್ಕೆ ಸರಿದಿದೆ.

ಕಾಂಗ್ರೆಸ್ ಹಾಗೂ ಆರ್‌ಜೆಡಿ ಪಿತೂರಿಯಿಂದ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ. ನಮ್ಮ ಮೈತ್ರಿಯನ್ನು ಮರುಪರಿಶೀಲಿಸುವುದಾಗಿ ಜೆಎಂಎಂ ನಾಯಕ ಸುದಿವ್ಯ ಕುಮಾರ್ ಹೇಳಿಕೆ ನೀಡಿದ್ದು, ನಂಬಿಕೆ ದ್ರೋಹಕ್ಕೆ ತಕ್ಕ ಉತ್ತರ ನೀಡುವುದಾಗಿ ಗುಡುಗಿದ್ದಾರೆ.

ಬಿಹಾರ ವಿಧಾನಸಭೆಯ 243 ಕ್ಷೇತ್ರಗಳಿಗೆ ನವೆಂಬರ್‌ 6 ಹಾಗೂ 11ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು ನವೆಂಬರ್‌ 14 ರಂದು ಮತ ಎಣಿಕೆ ನಡೆಯಲಿದೆ.