ರೆಸಾರ್ಟ್‌ನಲ್ಲೂ ಬಿಗ್‌ಬಾಸ್‌ ನಿಯಮ ಅನ್ವಯ!

ಬೆಂಗಳೂರು: ಬಿಡದಿಯ ಈಗಲ್‌ಟನ್‌ ರೆಸಾರ್ಟ್‌ನಲ್ಲೂ ಸ್ಪರ್ಧಿಗಳಿಗೆ ಬಿಗ್‌ಬಾಸ್‌ (Bigg Boss) ಮನೆಯ ನಿಯಮಗಳೇ ಅನ್ವಯವಾಗುತ್ತಿದೆ.

ಸ್ಪರ್ಧಿಗಳಿಗೆ ಜಾಲಿವುಡ್‌ ಸ್ಟುಡಿಯೋ (Jollywood Studios) ಮಾಲಿನ್ಯ ನಿಯಮ ಪಾಲನೆ ಮಾಡದ್ದಕ್ಕೆ ಈ ರೆಸಾರ್ಟ್‌ಗ ನಿಮ್ಮನ್ನು ಕರೆತರಲಾಗಿದೆ ಎಂಬ ವಿಚಾರವನ್ನು ಆಯೋಜಕರು ಸ್ಪರ್ಧಿಗಳಿಗೆ ತಿಳಿಸಿದ್ದಾರೆ. ಹೀಗಾಗಿ ಮರಳಿ ಶೋ ನಡೆಯುವವರೆಗೂ ನೀವು ನಮ್ಮ ಸುಪರ್ದಿಯಲ್ಲೇ ಇರಬೇಕಾಗುತ್ತದೆ ಎಂದು ತಿಳಿಸಿದ್ದು ಸ್ಪರ್ಧಿಗಳು ಒಪ್ಪಿಗೆ ನೀಡಿದ್ದಾರೆ ಎನ್ನಲಾಗುತ್ತಿದೆ.

ಇಂದು ಬೆಳಗ್ಗೆ ರೆಸಾರ್ಟ್ ಒಳಗಡೆಯೇ ಸ್ಪರ್ಧಿಗಳು ವಾಕಿಂಗ್, ಜಾಗಿಂಗ್, ಬ್ರೇಕ್ ಫಾಸ್ಟ್ ಮಾಡಿದ್ದಾರೆ. ಬಿಗ್‌ಬಾಸ್ ಮನೆಯಂತೆ ರೆಸಾರ್ಟ್‌ನಲ್ಲೂ ಕುಟುಂಬಸ್ಥರು, ಸ್ನೇಹಿತರ ಸಂಪರ್ಕಕ್ಕೆ ಸ್ಪರ್ಧಿಗಳು ಬರುವಂತಿಲ್ಲ. ಆಯೋಜಕರ ತಂಡದವರಿಗೆ ಮಾತ್ರ ಸ್ಪರ್ಧಿಗಳ ಭೇಟಿಗೆ ಅವಕಾಶ ನೀಡಲಾಗಿದೆ. ಇದನ್ನೂ ಓದಿ:  ಬಿಗ್‌ ಬಾಸ್‌ ಮನೆಗೆ ಬೀಗ – ರಕ್ಷಿತಾ ಡೈಲಾಗ್‌ ವೈರಲ್‌

 

ಈತನಕ ಸ್ಪರ್ಧಿಗಳಿಗೆ ಮೊಬೈಲ್, ಇಂಟರ್ನೆಟ್, ಟಿವಿ ಯಾವ ಸೌಲಭ್ಯಗಳನ್ನು ಒದಗಿಸಿಲ್ಲ ಎನ್ನುವ ಮಾಹಿತಿ ಸಿಕ್ಕಿದೆ. ರೆಸಾರ್ಟ್‌ನ ಭದ್ರತಾ ಸಿಬ್ಬಂದಿ ನಿಗಾದಲ್ಲಿ ಸ್ಪರ್ಧಿಗಳು ಇದ್ದಾರೆ. ಇದನ್ನೂ ಓದಿ: ಕಲಾವಿದರ ಮೇಲೆ ಸೇಡು ತೀರಿಸಿದ ನಟ್ಟು ಬೋಲ್ಟ್‌ ಮಿನಿಸ್ಟರ್‌- ಜೆಡಿಎಸ್‌ ಕಿಡಿ

ಯಾರ ಜೊತೆಯೂ ಸಂಪರ್ಕ ಇಟ್ಟುಕೊಳ್ಳುವಂತಿಲ್ಲ. ರೆಸಾರ್ಟ್ ಸಿಬ್ಬಂದಿಯ ಜೊತೆಯೂ ಮಾತುಕತೆ ಆಡುವಂತಿಲ್ಲ, ಊಟ, ತಿಂಡಿ ಇತ್ಯಾದಿಗಳನ್ನು ಕೋಣೆಗೆ ಕಳುಹಿಸಲಾಗುತ್ತಿದೆ ಎಂದು ಆಯೋಜಕರು ಸ್ಪರ್ಧಿಗಳಿಗೆ ಸೂಚಿಸಿದ್ದಾರೆ.

ಸ್ಪರ್ಧಿಗಳು ಎಲ್ಲಿಯವರೆಗೆ ರೆಸಾರ್ಟ್‌ನಲ್ಲಿ ಇರುತ್ತಾರೆ ಎನ್ನುವುದು ಖಚಿತವಾಗಿಲ್ಲ. ಬಿಗ್‌ ಬಾಸ್‌ ಶೋ ನಡೆಸಲು ಕೋರ್ಟ್‌ ಅನುಮತಿ ನೀಡಬಹುದು ಎಂಬ ವಿಶ್ವಾಸದಲ್ಲಿ ಆಯೋಜಕರು ಇದ್ದಾರೆ. ಕೋರ್ಟ್‌ ಪ್ರಕ್ರಿಯೆ ತಡವಾದರೆ ಸ್ಪರ್ಧಿಗಳನ್ನು ಖಾಸಗಿ ಹೋಟೆಲಿಗೆ ಶಿಫ್ಟ್‌ ಮಾಡಲು ವಾಹಿನಿ ಸಿದ್ಧತೆ ನಡೆಸಿದೆ ಎನ್ನಲಾಗುತ್ತಿದೆ.