ಸಂಗೀತ ಸಂಜೆಗೆ ಸಾಕ್ಷಿ ಆಯಿತು ಬಿಗ್ ಬಾಸ್ ಹೌಸ್

ಷ್ಟು ದಿನ ಕೋಪ, ಜಗಳ, ದೂಷಣೆಗಳೇ ಹೆಚ್ಚಾಗಿ ಕೇಳಿಸುತ್ತಿದ್ದ ಬಿಗ್‌ಬಾಸ್‌ (Bigg Boss Kannada) ಮನೆಯಲ್ಲಿಂದು ಹಬ್ಬದ ವಾತಾವರಣ. ಅದಕ್ಕೆ ಕಾರಣಗಳು ಹಲವು. ಕಲರ್ಸ್‌ ಕನ್ನಡದಲ್ಲಿ ಪ್ರಾರಂಭವಾಗುತ್ತಿರುವ ‘ಬೃಂದಾವನ’ ಧಾರಾವಾಹಿ ತಂಡ ಬಿಗ್‌ಬಾಸ್‌ ಮನೆಯೊಳಗೆ ಎಂಟ್ರಿ ಕೊಟ್ಟಿದ್ದು, ಅವರೊಂದಿಗೆ ನಕ್ಕು ನಲಿದ ಸ್ಪರ್ಧಿಗಳು ಪರ್ಫಾರ್ಮ್‌ ಮಾಡಿದ್ದಂತೂ ವಿಶೇಷವೇ. ಆದರೆ ಅದರ ಜೊತೆಗೆ ಇನ್ನೂ ಹಲವು ಫೀಲ್‌ಗುಡ್‌ ಸನ್ನಿವೇಶಗಳು ಮನೆಯಲ್ಲಿ ನಡೆದಿವೆ. ನಡೆಯುತ್ತಿವೆ. ಅದರಲ್ಲಿ ಇಶಾನಿ ಮತ್ತು ಸಂಗೀತಾ ಅವರ ಸಂಗೀತ ಕ್ಲಾಸ್‌ ಕೂಡ ಒಂದು.

ಹೆಸರಿನಲ್ಲಿಯೇ ಮ್ಯೂಸಿಕ್ ಇಟ್ಟುಕೊಂಡಿರುವ ಸಂಗೀತಾ (Sangeeta Sringeri) ಅವರು ಎಂದಿಗೂ ಸಂಗೀತಪ್ರೇಮಿಯಾಗಿ ಕಾಣಿಸಿಕೊಂಡವರಲ್ಲ. ಇಶಾನಿಯಂತೂ ರಾಪರ್ ಆಗಿಯೇ ಪ್ರಸಿದ್ಧರಾದವರು. ಇವರಿಬ್ಬರ ಕಾಂಬಿನೇಷನ್‌ನಲ್ಲಿ ಬಿಗ್‌ಬಾಸ್‌ ಮನೆಯಲ್ಲಿ ಸಂಗೀತ ಸಂಜೆ ನಡೆದಿದೆ. ಕಾರ್ತಿಕ್‌ ಮತ್ತು ತನಿಷಾ ಸ್ವಿಮ್ಮಿಂಗ್ ಪೂಲ್‌ ಬಳಿ ಆರಾಮವಾಗಿ ಮಲಗಿಕೊಂಡು ಹರಟೆ ಹೊಡೆಯುತ್ತಿದ್ದರು. ಅಲ್ಲಿಗೆ ಮೊದಲು ಬಂದಿದ್ದು ಇಶಾನಿ. ನಂತರ ಅವರ ಜೊತೆ ನೀತು, ನಮ್ರತಾ ಬಂದು ಕೂಡಿಕೊಂಡರು. ಆಗಲೇ ಇಶಾನಿ ಬಾಯಲ್ಲಿ, ‘ಪರಪ್ಪಪ್ಪಪ್ಪಾ…’ ಎಂದು ಸಂಗೀತದ ಫಲಕುಗಳನ್ನು ಹೇಳಲು ಶುರುಮಾಡಿದ್ದರು.

ಮಳೆ ಬರುವ ಹಾಗಿರುವ ಸಂಜೆ ಎಲ್ಲರಲ್ಲಿಯೂ ಹರಟೆ ಮೂಡ್‌ ಹುಟ್ಟಿಸಿತ್ತು. ನಮ್ರತಾಗೆ ಈ ವಾತಾವರಣದಲ್ಲಿ ಟ್ರಾವೆಲ್ ಮಾಡಬೇಕು ಅನಿಸುತ್ತಿದೆ ಎಂಬ ಅನಿಸಿಕೆಯನನ್ನೂ ಹಂಚಿಕೊಂಡರು. ಈ ಮಾತಿನ ನಡುವೆಯೇ ಕಾರ್ತಿಕ್ ಗರ್ಲ್‌ಫ್ರೆಂಡ್ ಬಗ್ಗೆಯೂ ಚರ್ಚೆ ಬಂತು. ‘ಈಗ ಯಾರು ನಿಂಗೆ ಸ್ಪೆಷಲ್ ಫ್ರೆಂಡ್‌?’ ಎಂದು ನಮ್ರತಾ ಕೇಳಿದರೆ ಕಾರ್ತಿಕ್ ಅಷ್ಟೇ ಚಾಣಕ್ಷತನದಿಂದ, ‘ಫ್ರೆಂಡ್ಸೆಲ್ಲ ಸ್ಪೆಷಲ್ಲೇ’ ಅಂದ್ರು. ಈ ಹೊತ್ತಿನಲ್ಲಿ ಈ ಗುಂಪಿನಿಂದ ತುಸು ದೂರದಲ್ಲಿ ಬಾಲ್ಕನಿ ಮೇಲೆ, ಮರದ ನೆರಳಿನಲ್ಲಿ ಸಂಗೀತಾ ಕೂತಿದ್ದರು. ಅವರನ್ನು ಸೇರಿಕೊಂಡವರು ಇಶಾನಿ. ‘ಇದು ತುಂಬ ಕಾಮ್‌ ಪ್ಲೇಸ್. ಇಲ್ಲಿನ ಎನರ್ಜಿಯೇ ಡಿಫರೆಂಟ್‌’ ಎಂದರು ಇಶಾನಿ. ಹಕ್ಕಿಗಳ ಕಲರವ, ಮರದ ತಂಪು ಎಲ್ಲದರ ಬಗ್ಗೆ ಸಂಗೀತಾ ಮತ್ತು ಇಶಾನಿ ಮಾತುಕತೆ ಸಾಗಿತು. ಸಂಗೀತಾ ಶಿಳ್ಳೆ ಹಾಕಿ ಹಕ್ಕಿಗಳ ಜೊತೆಗೆ ಮಾತುಕತೆ ನಡೆಸಲೂ ಪ್ರಯತ್ನಿಸಿದರು.

ಆಗಲೇ ಇಶಾನಿ  (Ishani) ಮತ್ತೆ, ‘ಪರಪ್ಪಪ್ಪ ಪ್ಪ ಪ್ಪ ಪ್ಪಾ…’ ಎಂದು ಹಾಡಲು ಶುರುಮಾಡಿದರು. ಸಂಗೀತಾಗೆ ಇದ್ದಕ್ಕಿದ್ದ ಹಾಗೆಯೇ ಸಂಗೀತ ಕಲಿಯುವ ಹುಕಿ ಬಂತು. ‘ನಂಗೂ ಕಲಿಸಿಕೊಡಿ’ ಎಂದು ಅವರು ಇಶಾನಿ ಬಳಿಯಿಂದ ಸಂಗೀತ ಹೇಳಿಸಿಕೊಳ್ಳಲು ಪ್ರಾರಂಭಿಸಿದರು. ಅಷ್ಟೇ ಅಲ್ಲ, ಗುರುವಿನಿಂದ ಶಹಭಾಶ್‌ಗಿರಿಯನ್ನೂ ಪಡೆದುಕೊಂಡರು. ಅತ್ತ ಕಡೆ ವರ್ತೂರ್ ಸಂತೋಷ್‌ ಮತ್ತಿತರರು ಕೃಷಿಯ ಕುರಿತಾಗಿ ಜೋರು ಜೋರಾಗಿ ಮಾತುಕತೆ ನಡೆಸುತ್ತಿದ್ದರೆ ಇತ್ತ ಬಾಲ್ಕನಿಯಲ್ಲಿ ಸಂಗೀತದ ಅಲೆಗಳು ಸಂಜೆಯ ತಂಗಾಳಿಯ ಹಾಗೆ ಸುಳಿಯುತ್ತಿದ್ದವು.

ರಾಪ್‌ ಸ್ಟೈಲ್‌ನಿಂದ ಇಶಾನಿ ಕ್ಲಾಸಿಕಲ್ ಮ್ಯೂಸಿಕ್ ಕಡೆಗೆ ಹೊರಳಿ, ‘ಸ ರಿ ಗ ಮ ಪ ದ ನಿ ಸ; ಸ ನಿ ದ ಪ ಮ ಗ ರಿ ಸ’ ಎಂದು ಸಂಗೀತಾ ಮತ್ತು ಇಶಾನಿ ಇಬ್ಬರೂ ಒಟ್ಟಿಗೇ ಹೇಳಿದರು. ಸಂಗೀತ ಅವರೂ ತಮಗಿರುವ ಸಂಗೀತದ ಅರಿವನ್ನು ಹಂಚಿಕೊಂಡರು. ಕೆಲವು ಕಾಲ ಇಶಾನಿ ಮತ್ತು ಸಂಗೀತಾ ನಡುವೆ ನಡೆದ ಈ ಸಂಗೀತದ ಜುಗಲ್ಬಂದಿ ನಿಜಕ್ಕೂ ಕುತೂಹಲಕಾರಿಯಾಗಿತ್ತು. ‘ಹಿಂದೆ ಡಾನ್ಸ್ ಕಲಿಯಬೇಕಿದ್ದರೆ ನನಗೆ ಸಂಗೀತ ಕಲಿಸುತ್ತಿದ್ದರು. ನನಗೆ ಸಂಗೀತವೆಂದರೆ ಆಗುತ್ತಿರಲಿಲ್ಲ. ನಿನ್ನ ಹೆಸರು ಸಂಗೀತ ಅಲ್ವಾ? ಹಾಡು ಹೇಳು ಅಂತಿದ್ರು. ಆಗೆಲ್ಲ ನಂಗೆ ಕಿರಿಕಿರಿಯಾಗುತ್ತಿತ್ತು. ಒಂದು ಹಾಡಿತ್ತು. ಯಾರೇ ಕೇಳಿದ್ರೂ ನಾನು ಆ ಹಾಡು ಹೇಳ್ತಿದ್ದೆ’ ಎಂದು ಸಂಗೀತಾ ಸಂಗೀತದ ಜೊತೆಗಿನ ತಮ್ಮ ಒಡನಾಟದ ನೆನಪನ್ನು ಹಂಚಿಕೊಂಡರು.

 

ಇಶಾನಿ ತಮಗೆ ಕರ್ನಾಟಿಕ್ ಶಾಸ್ತ್ರೀಯ ಸಂಗೀತ ಕಲಿಯುವ ಹಂಬಲ ಇರುವುದನ್ನು ಹೇಳಿಕೊಂಡರು. ಜೊತೆಗೆ ಪಾಶ್ಚಾತ್ಯ ಮತ್ತು ಭಾರತೀಯ ಸಂಗೀತದ ನಡುವಿನ ವ್ಯತ್ಯಾಸಗಳ ಬಗ್ಗೆಯೂ ಹೇಳಿಕೊಂಡರು. ಸಂಗೀತಾ ತುಂಬ ಆಸಕ್ತಿಯಲ್ಲಿ ಅವರ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದರು. ಮುಸ್ಸಂಜೆಯಲ್ಲಿ ಮನೆಯೊಳಗಿನ ದೀಪಗಳೆಲ್ಲ ಬೆಳಗಿದ್ದರೂ ಸಂಗೀತಾ ಮತ್ತು ಇಶಾನಿ ಸಂಗೀತ ಕಛೇರಿ ಮುಂದುವರಿದೇ ಇತ್ತು. ರಾಪರ್ ಬಾಯಲ್ಲಿ ‘ಸರಿಗಮಪದನಿಸ’ ಸುಮಧುರವಾಗಿ ಹೊಮ್ಮಿದ ಕ್ಷಣಗಳಿಗೆ ಈ ದಿನದ ಬಿಗ್‌ಬಾಸ್‌ ಮನೆ ಸಾಕ್ಷಿಯಾಯ್ತು. JioCinemaದಲ್ಲಿ ಎಲ್ಲ ಕ್ಷಣಗಳನ್ನೂ ನೋಡಬಹುದು.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]