ವಾರಕ್ಕೆ 31 ಕೋಟಿ – ಬಿಗ್‍ಬಾಸ್‍ನಲ್ಲಿ ಸಲ್ಮಾನ್ ಸಂಭಾವನೆ

ಹೈದರಾಬಾದ್: ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ‘ಬಿಗ್‍ಬಾಸ್ ಸೀಸನ್ 13’ ರ ನಿರೂಪಕರಾಗಿ ಮತ್ತೆ ಕಿರುತೆರೆಗೆ ಮರಳುತ್ತಿದ್ದು, ಈ ಬಾರಿ ಅವರು ವಾರಂತ್ಯದ ನಿರೂಪಣೆಗಾಗಿ ಬೃಹತ್ ಸಂಭಾವನೆ ಪಡೆಯುತ್ತಿದ್ದಾರೆ.

ವರದಿಯೊಂದರ ಪ್ರಕಾರ ಸಲ್ಮಾನ್ ಖಾನ್ ಅವರು ಬಿಗ್‍ಬಾಸ್ ರಿಯಾಲಿಟಿ ಶೋನ ಹೊಸ ಸೀಸನ್‍ಗೆ ವಾರಂತ್ಯದ ನಿರೂಪಣೆಗಾಗಿ ಬರೋಬ್ಬರಿ 31 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ. ಬಿಗ್‍ಬಾಸ್ ರಿಯಾಲಿಟಿ ಶೋನಲ್ಲಿ ವಾರಂತ್ಯಕ್ಕೆ 31 ಕೋಟಿಯಂತೆ ಒಟ್ಟು ಅವರು 403 ಕೋಟಿ ರೂ. ಸಂಭಾವನೆ ಪಡೆಯುತ್ತಿದ್ದಾರೆ.

ಇದೀಗ ಬಾಲಿವುಡ್ ಅಂಗಳದಲ್ಲಿ ಸಲ್ಮಾನ್ ಖಾನ್ ಅವರ ಸಂಭಾವನೆಯ ಬಗ್ಗೆ ಚರ್ಚೆಯಾಗುತ್ತಿದೆ. ಸದ್ಯಕ್ಕೆ ಈ ಮೂಲಕ ಸಲ್ಮಾನ್ ಖಾನ್ ಕಿರುತೆರೆಯಲ್ಲಿ ಅತ್ಯಧಿಕ ಸಂಭಾವನೆ ಪಡೆಯುವ ನಟರಾಗಿ ಹೊರಹೊಮ್ಮಿದ್ದಾರೆ. ಇತ್ತೀಚೆಗೆ ಬಿಗ್‍ಬಾಸ್ ಸೀಸನ್ 13ರ ನಿರೂಪಕರಾಗಿ ಸಲ್ಮಾನ್ ಖಾನ್ ಬರುತ್ತಿಲ್ಲ ಎಂದು ವದಂತಿ ಹಬ್ಬಿತ್ತು. ಆದರೆ ಸಲ್ಮಾನ್ ಅವರು ಸಂದರ್ಶನವೊಂದರಲ್ಲಿ ಮತ್ತೆ ಬಿಗ್‍ಬಾಸ್‍ಗೆ ವಾಪಸ್ ಆಗುತ್ತಿರುವ ಬಗ್ಗೆ ದೃಢಪಡಿಸಿದ್ದಾರೆ.

ಬಿಗ್‍ಬಾಸ್ ರಿಯಾಲಿಟಿ ಶೋನ ಮುಂದಿನ ಸೀಸನ್ ಸೆಪ್ಟೆಂಬರ್ 29 ರಂದು ಪ್ರಸಾರವಾಗಲಿದೆ. ಈ ಸೀಸನ್ ಕೇವಲ ಸೆಲೆಬ್ರಿಟಿ ಸ್ಪರ್ಧಿಗಳನ್ನು ಮಾತ್ರ ಒಳಗೊಂಡಿರುತ್ತದೆ ಎಂದು ತಿಳಿದು ಬಂದಿದೆ. ಈ ಹಿಂದೆ ಬಿಗ್‍ಬಾಸ್‍ನ ಮೂರು ಸೀಸನ್‍ನಲ್ಲಿ ಸೆಲೆಬ್ರಿಟಿಗಳು ಮತ್ತು ಸಾಮಾನ್ಯ ಸ್ಪರ್ಧಿಗಳು ಭಾಗವಹಿಸಿದ್ದರು. ಆದರೆ ಕಳೆದ ಸೀಸನ್‍ನಲ್ಲಿ ಶೋನ ರೇಟಿಂಗ್ ಕಡಿಮೆಯಾಗಿದ್ದರಿಂದ ಈ ಬಾರಿ ಸಾಮಾನ್ಯರಿಗೆ ಅವಕಾಶವಿಲ್ಲ ಎಂದು ತಿಳಿದು ಬಂದಿದೆ.

‘ಬಿಗ್‍ಬಾಸ್ ಸೀಸನ್ 13’ನೇ ಶೋನ ಶೂಟಿಂಗ್ ಹೊಸ ಸ್ಥಳದಲ್ಲಿ ನಡೆಯುತ್ತಿದೆ ಎಂದು ವರದಿಗಳು ತಿಳಿಸಿವೆ. ಕಳೆದ 11 ಆವೃತ್ತಿಗಳ ಶೂಟಿಂಗ್ ಪುಣೆ ಬಳಿಯ ಲೋನಾವಾಲಾದಲ್ಲಿ ಚಿತ್ರೀಕರಿಸಲಾಗಿತ್ತು. ಆದರೆ ಈ ಬಾರಿ ಮುಂಬೈನಲ್ಲಿ ಚಿತ್ರೀಕರಿಸಲು ಸಿದ್ಧತೆ ನಡೆದಿದೆ. ‘ಬಿಗ್‍ಬಾಸ್ ಸೀಸನ್ 5’ನೇ ಶೋವನ್ನು ಗುಜರಾತಿನ ಕಾರ್ಜತ್‍ನಲ್ಲಿ ಚಿತ್ರೀಕರಿಸಲಾಗಿತ್ತು.

Comments

Leave a Reply

Your email address will not be published. Required fields are marked *