ರೈಲ್ವೆ ಸ್ಟೇಷನ್‍ನಲ್ಲಿ ಸಿಕ್ಕ ಗ್ರನೇಡ್‍ಗೆ ಬಿಗ್ ಟ್ವಿಸ್ಟ್

ಬೆಂಗಳೂರು: ಮೆಜೆಸ್ಟಿಕ್ ರೈಲ್ವೆ ಪ್ಲಾಟ್ ಫಾರ್ಮ್‌ನಲ್ಲಿ ಸಿಕ್ಕ ಅನುಮಾನಾಸ್ಪದ ವಸ್ತು ಪ್ರಕರಣಕ್ಕೆ ಸ್ಫೋಟಕ ತಿರುವ ಸಿಕ್ಕಿದೆ. ಒಬ್ಬ ಮಹಿಳಾ ಅಧಿಕಾರಿಯನ್ನ ಕಟ್ಟಿ ಹಾಕಲು ನಡೆದಿರುವ ಸಂಚು ಎಂದು ಹೇಳಲಾಗುತ್ತಿದೆ.

ರೈಲ್ವೆ ಇಲಾಖೆಯ ಬೆಂಗಳೂರು ಡಿವಿಷನ್‍ಗೆ ಇತ್ತೀಚಿಗಷ್ಟೇ ಬಂದಿರುವ ಮಹಿಳಾ ಅಧಿಕಾರಿಯನ್ನ ಕಟ್ಟಿ ಹಾಕಲು ಅಲ್ಲಿಯ ಸಿಬ್ಬಂದಿಯೇ ಮಸಲತ್ತು ಮಾಡಿದ್ದಾರೆ ಅನ್ನೋ ಮಾತುಗಳು ರೈಲ್ವೆ ಇಲಾಖೆಯಲ್ಲಿ ಹರಿದಾಡುತ್ತಿದೆ.

ಆರ್‌ಪಿಎಫ್ ಗೆ ಡಿವಿಷನ್ ಸೆಕ್ಯೂರಿಟಿ ಕಮಿಷನರ್ ಆಗಿ ಕಳೆದ ಮೂರು ತಿಂಗಳ ಹಿಂದೆ ದೇವಾ ಸ್ಮಿತಾ ಚಟೋಪಾದ್ಯಾಯ ಅಧಿಕಾರ ವಹಿಸಿಕೊಂಡಿದ್ದಾರೆ. ಉತ್ತರ ಭಾರತದ ಕಡೆ ಕೆಲಸ ಮಾಡಿ ಬೆಂಗಳೂರಿಗೆ ಬಂದಿರುವ ದೇವಾ ಸ್ಮಿತಾ ಆರ್‌ಪಿಎಫ್ ಸಿಬ್ಬಂದಿಗಳಿಗೆ ಫುಲ್ ಆಕ್ಟಿವ್ ಮಾಡಿದ್ದಾರೆ. ಜಡ್ಡು ಹಿಡಿದಿದ್ದ ಆರ್‌ಪಿಎಫ್ ಸಿಬ್ಬಂದಿಗಳಿಗೆ ಆರ್‌ಪಿಎಫ್ ಗೆ ಡಿವಿಷನ್ ಸೆಕ್ಯೂರಿಟಿ ಕಮಿಷನರ್ ದೇವಾ ಸ್ಮಿತಾ ಚಟೋಪಾದ್ಯಾಯ ಬಿಸಿಮುಟ್ಟಿಸಿದ್ದಾರೆ.

ದೇವಾ ಸ್ಮಿತಾ ಚಟೋಪಾದ್ಯಾಯ ಆರ್‌ಪಿಎಫ್ ಸಿಬ್ಬಂದಿಗಳಿಗೆ ಹಿಡಿತದಲ್ಲಿ ಇಟ್ಟುಕೊಳ್ಳಲು ಪ್ರಯತ್ನಿಸಿದ್ದೆ ಈ ಘಟನೆಗೆ ಕಾರಣವಾಯ್ತಾ ಅನ್ನೋ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಡಿವಿಷನ್ ಸೆಕ್ಯೂರಿಟಿ ಕಮಿಷನರ್ ದೇವಾ ಸ್ಮಿತಾ ಖಡಕ್ ನಿರ್ಧಾರದಿಂದ ಕಂಗೆಟ್ಟಿದ್ದ ಆರ್‌ಪಿಎಫ್ ಸಿಬ್ಬಂದಿಗಳೇ ದೇವಾ ಸ್ಮಿತಾರಿಗೆ ಕಪ್ಪು ಚುಕ್ಕೆ ತರಲು ಪ್ಲಾಟ್‍ ಫಾರ್ಮ್‌ನಲ್ಲಿ ಡಮ್ಮಿ ಗ್ರಾನೈಡ್ ತಂದಿಟ್ಟು ಪ್ಯಾನಿಕ್ ಮಾಡಿದ್ದಾರೆಂದು ಹೇಳಲಾಗುತ್ತಿದೆ.

ಇನ್ನು ಇಷ್ಟೆಲ್ಲಾ ಪ್ಲಾನ್ ಮಾಡಿದವರು ಉದ್ದೇಶ ಪೂರಕವಾಗಿಯೇ ಸಿಸಿಟಿವಿ ಆಫ್ ಮಾಡಿದ್ರಾ? ಅಥವಾ ಅದೊಂದು ಕಾಕತಾಳಿಯ ಘಟನೆಯಾ ಅನ್ನೋ ಅನುಮಾಗಳು ಕೇಳಿ ಬರುತ್ತಿವೆ. ವಿಧಿ ವಿಜ್ಞಾನ ಪ್ರಯೋಗಾಲಯ ಪ್ಲಾಟ್ ಫಾರ್ಮ್‌ನಲ್ಲಿ ಸಿಕ್ಕಿರುವ ಗ್ರಾನೈಟ್ ಸಂಪೂರ್ಣ ಡಮ್ಮಿ ಎಂದು ವರದಿ ಕೊಟ್ಟಿದೆ. ಇತ್ತ ಆರ್‌ಪಿಎಫ್ ನ ಡಿವಿಷನ್ ಸೆಕ್ಯೂರಿಟಿ ಕಮಿಷನರ್ ದೇವಾ ಸ್ಮಿತಾಗೆ ಕಟ್ಟಿ ಹಾಕಲು ಡಮ್ಮಿ ಗ್ರನೇಡ್ ರೂಪದ ವಸ್ತು ಇಟ್ಟಿದ್ದಾರೆ ಎಂದು ಕೇಳಿ ಬರುತ್ತಿರುವ ಮಾತಿಗೆ ಹೊಂದಾಣಿಕೆ ಆಗುತ್ತಿರುವುದಕ್ಕೆ ಮತ್ತಷ್ಟು ಅನುಮಾನಗಳಿಗೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.

ಉದ್ದೇಶ ಪೂರಕವಾಗಿಯೇ ಈ ಘಟನೆ ಮಾಡಿದರೆ ಡಮ್ಮಿ ಗ್ರನೇಡ್ ಸಿಕ್ಕಿದ್ದಾದರೂ ಎಲ್ಲಿ? ಇಟ್ಟವರು ಯಾರು? ಅನ್ನೋ ಪ್ರಶ್ನೆಗಳಿಗೆ ಪೊಲೀಸರೇ ಉತ್ತರ ನೀಡಬೇಕಾಗುತ್ತದೆ.

Comments

Leave a Reply

Your email address will not be published. Required fields are marked *