ಬೇಲೆಕೇರಿ ಅದಿರು ನಾಪತ್ತೆ ಕೇಸ್‌- ಸೈಲ್‌ಗೆ ರಿಲೀಫ್‌, ಶಿಕ್ಷೆಯನ್ನು ಅಮಾನತಿನಲ್ಲಿಟ್ಟ ಹೈಕೋರ್ಟ್‌

– ಗುರುವಾರ ಜೈಲಿನಿಂದ ಬಿಡುಗಡೆ ಸಾಧ್ಯತೆ

ಬೆಂಗಳೂರು: ಬೇಲೆಕೇರಿ ಅದಿರು ನಾಪತ್ತೆ ಪ್ರಕರಣಕ್ಕೆ (Belekeri Port Case) ಸಂಬಂಧಿಸಿದಂತೆ ಕಾಂಗ್ರೆಸ್‌ ಶಾಸಕ ಸತೀಶ್ ಸೈಲ್ (Congress MLA Satish Sail) ಹೈಕೋರ್ಟ್‌ನಿಂದ ಬಿಗ್‌ ರಿಲೀಫ್‌ ಸಿಕ್ಕಿದೆ. ಸತೀಶ್‌ ಸೈಲ್‌ ಹಾಗೂ ಇತರೆ ಆರೋಪಿಗಳಿಗೆ ವಿಧಿಸಿರುವ ಶಿಕ್ಷೆಯನ್ನು ಹೈಕೋರ್ಟ್‌ (High Court) ಅಮಾನತ್ತಿನಲ್ಲಿಟ್ಟು ಆದೇಶ ಪ್ರಕಟಿಸಿದೆ.

ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಿಧಿಸಿರುವ ದಂಡದ ಮೊತ್ತದಲ್ಲಿ 25% ರಷ್ಟು ಕೋರ್ಟ್ ನಲ್ಲಿ ಠೇವಣಿ ಇಡುವಂತೆ ಷರತ್ತು ವಿಧಿಸಿದೆ. ದಂಡದ ಮೊತ್ತವನ್ನು 6 ವಾರದಲ್ಲಿ ಠೇವಣಿ ಇಡುವಂತೆ ಅಪರಾಧಿಗಳಿಗೆ ಸೂಚಿಸಿದೆ. ಇದನ್ನೂ ಓದಿ: ಅಧಿಕಾರಿಗಳು ಜಡ್ಜ್‌ ಆಗಲು ಸಾಧ್ಯವಿಲ್ಲ – ಬುಲ್ಡೋಜರ್‌ ನ್ಯಾಯಕ್ಕೆ ಸುಪ್ರೀಂ ಎಚ್ಚರಿಕೆ

ಜನಪ್ರತಿನಿಧಿಗಳ ಕೋರ್ಟ್‌ ನೀಡಿದ ಆದೇಶವನ್ನು ರದ್ದು ಪಡಿಸುವಂತೆ ಸತೀಶ್‌ ಸೈಲ್‌, ಉದ್ಯಮಿಗಳಾದ ಸ್ವಸ್ತಿಕ್‌ ನಾಗರಾಜ್‌, ಕೆವಿಎನ್‌ ಗೋವಿಂದರಾಜ್‌ ಮತ್ತು ಚೇತನ್‌ ಶಾ ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿದ್ದರು. ಶಿಕ್ಷೆಯನ್ನು ಅಮಾನತಿನಲ್ಲಿಟ್ಟ ಹಿನ್ನೆಲೆಯಲ್ಲಿ ಗುರುವಾರ ಆರೋಪಿಗಳು ಜೈಲಿನಿಂದ ಬಿಡುಗಡೆಯಾಗುವ ಸಾಧ್ಯತೆಯಿದೆ.

6 ಪ್ರಕರಣದಲ್ಲಿ ದೋಷಿಯಾಗಿದ್ದ ಸತೀಶ್‌ ಸೈಲ್‌ಗೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ 7 ವರ್ಷ ಜೈಲು ಶಿಕ್ಷೆ ಮತ್ತು 44 ಕೋಟಿ ರೂ. ದಂಡ ವಿಧಿಸಿತ್ತು.

 

ಏನಿದು ಪ್ರಕರಣ?
ಅಂಕೋಲಾ ತಾಲೂಕಿನ ಬೇಲೆಕೇರಿ ವ್ಯಾಪ್ತಿಯಲ್ಲಿ 2009- 2010ರ ಅವಧಿಯಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದ ಮಾಹಿತಿ ಮೇರೆಗೆ ಅರಣ್ಯಾಧಿಕಾರಿಗಳು ದಾಳಿ ನಡೆಸಿ 200 ಕೋಟಿ ರೂ.ಗಳಿಗೂ ಹೆಚ್ಚು ಮೌಲ್ಯದ ಸುಮಾರು 11,312 ಮೆಟ್ರಿಕ್‌ ಟನ್‌ ಕಬ್ಬಿಣದ ಅದಿರನ್ನು ಜಪ್ತಿ ಮಾಡಿದ್ದರು.

ಈ ಅದಿರನ್ನು ಬೇಲೆಕೇರಿ ಬಂದರಿನ ಅಧಿಕಾರಿ ಮಹೇಶ್‌ ಬಿಳಿಯ ಅವರ ಸುಪರ್ದಿಗೆ ನೀಡಿದ್ದರು. ಆದರೆ ಮಹೇಶ್‌ ಬಿಳಿಯ ಅವರು ಶಾಸಕ ಸತೀಶ್‌ ಸೈಲ್‌ ಹಾಗೂ ಇತರ ಆರೋಪಿಗಳು ಈ ಅದಿರು ಕಳವು ಮಾಡಲು ಒಳ ಸಂಚು ರೂಪಿಸಿದ್ದರು ಎಂದು ಆರೋಪಿಸಲಾಗಿತ್ತು. ಆರೋಪಿಗಳ ಪೈಕಿ ಕೆಲವರು ಸತೀಶ್‌ ಸೈಲ್‌ಗೆ ಕಡಿಮೆ ಮೊತ್ತಕ್ಕೆ ಜಪ್ತಿ ಮಾಡಿದ ಅದಿರನ್ನುಮಾರಾಟ ಮಾಡಿದ್ದರು. ಬೇಲೆಕೇರಿ ಅದಿರು ನಾಪತ್ತೆಗೆ ಸಂಬಂಧಿಸಿದ ಆರು ಪ್ರಕರಣಗಳ ತನಿಖೆ ನಡೆಸಿದ್ದ ಸಿಬಿಐ 2013ರಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿತ್ತು.

ಎಂಟು ತಿಂಗಳ ಅವಧಿಯಲ್ಲಿ ಸೈಲ್ ಮಾಲೀಕತ್ವದ ಮಲ್ಲಿಕಾರ್ಜುನ ಶಿಪ್ಪಿಂಗ್ ಕಂಪನಿ ಸುಮಾರು 7.23 ಲಕ್ಷ ಟನ್ ಮೆಟ್ರಿಕ್ ಅದಿರನ್ನು ಬೇಲೆಕೇರಿ ಮೂಲಕ ವಿದೇಶಕ್ಕೆ ರಫ್ತು ಮಾಡಿದ್ದನ್ನು ಸಿಬಿಐ ತನಿಖೆಯಲ್ಲಿ ಪತ್ತೆ ಹಚ್ಚಿತ್ತು. 2012ರಲ್ಲಿ ಸೈಲ್ ನಿವಾಸದ ಮೇಲೆ ದಾಳಿ ನಡೆಸಿದ್ದ ಸಿಬಿಐ 2013ರಲ್ಲಿ ಬಂಧಿಸಿತ್ತು. ಆಗ ಸತೀಶ್ ಸೈಲ್ ಒಂದು ವರ್ಷಕ್ಕೂ ಹೆಚ್ಚು ಕಾಲ ಜೈಲಲ್ಲಿ ಇದ್ದರು. ವಿಶೇಷ ಏನೆಂದರೆ ಆಗಲೂ ಕೂಡ ಸತೀಶ್ ಸೈಲ್ ಶಾಸಕರಾಗಿದ್ದರು.