ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಬಾರ್‍ಗಳು ಬಂದ್ ಆದ್ರೂ ಶನಿವಾರ ಒಂದೇ ರಾತ್ರಿ ದಾಖಲಾದ ಡ್ರಂಕ್-ಡ್ರೈವಿಂಗ್ ಕೇಸ್‍ಗಳೆಷ್ಟು ಗೊತ್ತಾ?

ಬೆಂಗಳೂರು: ಜುಲೈ 1ರಿಂದ ರಾಷ್ಟ್ರೀಯ ಹೆದ್ದಾರಿಗಳಲ್ಲಿನ ಅನೇಕ ಬಾರ್ ಹಾಗೂ ಪಬ್‍ಗಳು ಮುಚ್ಚಲ್ಪಟ್ಟಿದ್ದರೂ ಸಹ ಶನಿವಾರದ ಒಂದೇ ರಾತ್ರಿಯಲ್ಲಿ ಸಂಚಾರಿ ಪೊಲೀಸರು ಬರೋಬ್ಬರಿ 1032 ಡ್ರಂಕ್ ಡ್ರೈವಿಂಗ್ ಪ್ರಕರಣಗಳನ್ನ ದಾಖಲಿಸಿಕೊಂಡಿದ್ದಾರೆ.

ಹೆಬ್ಬಾಳ, ಮತ್ತಿಕೆರೆ, ಜಾಲಹಳ್ಳಿ, ಜೆಪಿ ಪಾರ್ಕ್, ಸಂಜಯನಗರ, ಯಶವಂತಪುರ, ಹೆಚ್‍ಎಂಟಿ ವಾರ್ಡ್, ಮಲ್ಲೇಶ್ವರಂ ಹಾಗೂ ಚಿಕ್ಕಪೇಟೆ ವ್ಯಾಪ್ತಿಯಲ್ಲಿ 460 ಕೇಸ್‍ಗಳು ದಾಖಲಾಗಿವೆ. ರಾಷ್ಟ್ರಿಯ ಹೆದ್ದಾರಿಯಲ್ಲಿ ಮದ್ಯ ಮಾರಾಟಕ್ಕೆ ಬ್ರೇಕ್ ಹಾಕಿದ್ದರೂ ಕೂಡ ಜನರು ಬೇರೊಂದು ಮಾರ್ಗ ಹುಡುಕಿಕೊಂಡಿರುವ ಕಾರಣ ಡ್ರಂಕ್ ಡ್ರೈವಿಂಗ್ ಪ್ರಕರಣಗಳಲ್ಲಿ ಏರಿಕೆಯಾಗಿದೆ ಎಂದು ಹೇಳಲಾಗಿದೆ.

ಸಂಚಾರಿ ಡಿಸಿಪಿ(ಪಶ್ಚಿಮ) ಶೋಭಾ ರಾಣಿ ಅವರ ಪ್ರಕಾರ, ವಿವಿಧ ಚೆಕ್‍ಪಾಯಿಂಟ್‍ಗಳಲ್ಲಿ ರಾತ್ರಿ 8 ಗಂಟೆಯಿಂದ 2 ಗಂಟೆವರೆಗೆ ಪರಿಶೀಲನೆ ನಡೆಸಲಾಗಿದೆ. ಕುಡಿದು ವಾಹನ ಚಲಾಯಿಸುತ್ತಿದ್ದವರ ಲೈಸೆನ್ಸ್ ಅಮಾನತುಗೊಳಿಸಿ ದಂಡ ಪಾವತಿಸಲು ಕೋರ್ಟ್‍ಗೆ ಕಳಿಸಲಾಗಿದೆ ಎಂದು ಹೇಳಿದ್ದಾರೆ.

ಕುಡಿದು ವಾಹನ ಚಾಲನೆ ಮಾಡುವುದರಿಂದ ಆಗಬಹುದಾದ ಅಪಾಯಗಳ ಬಗ್ಗೆ ಜನರಿಗೆ ಸಾಕಷ್ಟು ಮನವರಿಕೆ ಮಾಡಿಕೊಟ್ಟಿದ್ದರೂ, ಅಭಿಯಾನಗಳನ್ನ ನಡೆಸಿದ್ದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಮದ್ಯ ಮಾರಾಟ ನಿಷೇಧವಾಗಿದ್ದರೂ ಯಾವುದೇ ಪರಿಣಾಮವಾಗಿಲ್ಲ.

ಸಂಚಾರಿ ಸಹಾಯಕ ಆಯುಕ್ತರಾದ ಆರ್ ಹಿತೇಂದ್ರ ಈ ಬಗ್ಗೆ ಪತ್ರಿಕೆಯೊಂದಕ್ಕೆ ಹೇಳಿಕೆ ನೀಡಿದ್ದು, ನಾವು ಚೆಕ್‍ಪಾಯಿಂಟ್‍ಗಳಲ್ಲಿ ಹೆಚ್ಚಿನ ಅಧಿಕಾರಿಗಳನ್ನ ನಿಯೋಜಿಸಿ ಮತ್ತಷ್ಟು ಕೇಸ್ ದಾಖಲಿಸಲಿದ್ದೇವೆ. ಪ್ರಸ್ತಾವನೆಯಾಗಿರುವ ತಿದ್ದುಪಡಿಗಳು ಕಾನೂನಾಗಿ ಜಾರಿಯಾದ ನಂತರ ಶಿಕ್ಷೆ ಮತ್ತಷ್ಟು ಕಠಿಣವಾಗಿರುತ್ತದೆ. ಆಗ ಕಾನೂನಿನ ಭಯದಿಂದಾದ್ರೂ ಜನ ಕುಡಿಯೋದನ್ನ ಕಡಿಮೆ ಮಾಡಬಹುದು ಎಂದಿದ್ದಾರೆ.

2016ರ ಮೋಟಾರ್ ವಾಹನ ತುದ್ದುಪಡಿ ಕಾಯ್ದೆಯಡಿ ಕುಡಿದು ವಾಹನ ಚಾಲನೆ ಮಾಡುವವರಿಗೆ ಕಠಿಣ ಶಿಕ್ಷೆಗೆ ಅವಕಾಶವಿದೆ. ಡ್ರಂಕ್ ಡ್ರೈವಿಂಗ್‍ನಲ್ಲಿ ಸಿಕ್ಕಿ ಬಿದ್ದವರಿಗೆ 2 ಸಾವಿರ ರೂ. ನಿಂದ 10 ಸಾವಿರ ರೂ.ವರೆಗೆ ದಂಡ ಹಾಕಲಾಗುತ್ತದೆ.

Comments

Leave a Reply

Your email address will not be published. Required fields are marked *