ರಾಮೇಶ್ವರ ಕೆಫೆಯಲ್ಲಿ ಸ್ಫೋಟ – ಸ್ಥಳಕ್ಕೆ ಭಯೋತ್ಪಾದನಾ ನಿಗ್ರಹ ದಳ ಎಂಟ್ರಿ

ಬೆಂಗಳೂರು: ವೈಟ್‌ ಫೀಲ್ಡ್‌ ಬಳಿ ಬ್ರೂಕ್‌ಫೀಲ್ಡ್‌ನ ರಾಮೇಶ್ವರ ಕೆಫೆಯಲ್ಲಿ ನಿಗೂಢ ಸ್ಫೋಟ (Rameshwaram Cafe Blast) ಸಂಬಂಧ ಸ್ಥಳಕ್ಕೆ ಭಯೋತ್ಪಾದನಾ ನಿಗ್ರಹ ದಳ (ATS) ಎಂಟ್ರಿಕೊಟ್ಟಿದೆ.

ಕೈ ತೊಳೆಯುವ ಜಾಗದಲ್ಲಿ ಸ್ಫೋಟ ಸಂಭವಿಸಿದೆ. ಸ್ಥಳದಲ್ಲಿ ಬ್ಯಾಟರಿ, ಬೋಲ್ಟ್‌ಗಳು ಪತ್ತೆಯಾಗಿದೆ. ಮಧ್ಯಾಹ್ನ 1:05ರ ವೇಳೆಗೆ ಈ ಸ್ಫೋಟ ಸಂಭವಿಸಿದೆ. ಘಟನೆಯಲ್ಲಿ ಒಟ್ಟು ಐವರು ಗಾಯಗೊಂಡಿದ್ದು ಒಬ್ಬರ ಸ್ಥಿತಿ ಗಂಭೀರವಾಗಿದೆ.
ಇದನ್ನೂ ಓದಿ: ಬೆಂಗಳೂರಿನ ಕೆಫೆಯಲ್ಲಿ ಭೀಕರ ಸ್ಫೋಟ – Photos

ಈ ಬಗ್ಗೆ ಪಬ್ಲಿಕ್‌ ಟಿವಿಗೆ ಪ್ರತಿಕ್ರಿಯಿಸಿದ ಸ್ಥಳೀಯರು, ಆರಂಭದಲ್ಲಿ ಗ್ಯಾಸ್‌ ಸ್ಫೋಟಗೊಂಡಿರಬಹುದು ಎಂದು ನಾವು ಅನುಮಾನ ವ್ಯಕ್ತಪಡಿಸಿದ್ದೆವು. ಆದರೆ ನಂತರ ಸ್ಥಳಕ್ಕೆ ಹೋದಾಗ ಸಿಲಿಂಡರ್‌ ಸ್ಫೋಟಗೊಂಡಿಲ್ಲ ಎನ್ನುವ ವಿಚಾರ ಗೊತ್ತಾಯಿತು. ಅಡುಗೆ ಕೋಣೆಯಲ್ಲಿ ಸ್ಫೋಟ ಸಂಭವಿಸಿಲ್ಲ. ದೊಡ್ಡ ಬಂಡೆ ಕಲ್ಲುಗಳನ್ನು ಸ್ಫೋಟ ಮಾಡುವಾಗ ಯಾವ ರೀತಿಯ ಶಬ್ಧ ಬರುತ್ತದೋ ಆ ರೀತಿಯ ಶಬ್ಧ ಬಂದಿತ್ತು ಎಂದು ಹೇಳಿದ್ದಾರೆ.

ಪೊಲೀಸರ ಜೊತೆ ಸ್ಥಳಕ್ಕೆ ವಿಧಿ ವಿಜ್ಞಾನ ಪ್ರಯೋಗಾಲಯದ (FSL) ಅಧಿಕಾರಿಗಳು ಭೇಟಿ ನೀಡಿದ್ದು ಪರಿಶೀಲನೆ ನಡೆಯುತ್ತಿದೆ.