ಪಶು ಸಂಗೋಪನಾ ಸಚಿವರ ಕ್ಷೇತ್ರದಲ್ಲೇ ಇದ್ದು ಇಲ್ಲವಾಯ್ತು ‘ಪಶು ಪಾಲಿ ಕ್ಲಿನಿಕ್’

ಬೀದರ್: 2014ರಲ್ಲಿ ಬಿಜೆಪಿ ಸರ್ಕಾರ ‘ಪಶು ಪಾಲಿ ಕ್ಲಿನಿಕ್’ ಗಳನ್ನು ರಾಜ್ಯಾದ್ಯಂತ ಘೋಷಣೆ ಮಾಡಿ, ಕೋಟ್ಯಂತರ ರೂಪಾಯಿ ಅನುದಾನವನ್ನು ಬಿಡುಗಡೆ ಮಾಡಿತ್ತು. ಆದರೆ ಗಡಿಯಲ್ಲಿರುವ ಸ್ವತಃ ಪಶು ಸಂಗೋಪನಾ ಸಚಿವ ಪ್ರಭು ಚೌಹಾಣ್ ಅವರ ಕ್ಷೇತ್ರವಾದ ಬೀದರ್ ನಲ್ಲಿರುವ ಪಶು ಪಾಲಿ ಕ್ಲೀನಿಕ್‍ಗೆ ಇನ್ನು ಉದ್ಘಾಟನೆ ಭಾಗ್ಯ ಸಿಕ್ಕಿಲ್ಲ.

ಗ್ರಾಮೀಣ ಪ್ರದೇಶದ ಪಶುಗಳಿಗೆ ಉನ್ನತ ವೈದ್ಯಕೀಯ ಚಿಕಿತ್ಸೆ ಸೌಲಭ್ಯ ಕಲ್ಪಿಸುವ ದಿಸೆಯಲ್ಲಿ ಸರ್ಕಾರ 1.84 ಲಕ್ಷ ರೂ. ಅನುದಾನದಲ್ಲಿ ಪಶು ಪಾಲಿ ಕ್ಲಿನಿಕ್ ಆರಂಭಿಸಿತ್ತು. ಈ ಪಶು ಪಾಲಿ ಕ್ಲಿನಿಕ್ ನಿರ್ಮಾಣವಾಗಿ 6 ತಿಂಗಳುಗಳಾದರೂ ಇನ್ನು ಉದ್ಘಾಟನೆ ಮಾಡದೇ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ.

ತಜ್ಞರು, ವೈದ್ಯರು, ಯಂತ್ರೋಪಕರಣಗಳು ಹಾಗೂ ಮೂಲಭೂತ ಸೌಕರ್ಯದ ಕೊರತೆ ಸೇರಿದಂತೆ ಹಲವಾರು ಕಾರಣಗಳಿಂದ ಉದ್ಘಾಟನೆ ಭಾಗ್ಯಕ್ಕೆ ತೊಡಕಾಗಿದೆ. ಬೀದರ್ ಅಷ್ಟೇ ಅಲ್ಲದೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಈ ಪಶು ಪಾಲಿ ಕ್ಲಿನಿಕ್ ಇನ್ನೂ ಉದ್ಘಾಟನೆ ಭಾಗ್ಯ ಕಂಡಿಲ್ಲ ಎನ್ನುವುದೇ ಬೇಸರದ ಸಂಗತಿಯಾಗಿದೆ.

ಈ ಪಶು ಪಾಲಿ ಕ್ಲಿನಿಕ್ ನಲ್ಲಿ ಹೈಟೆಕ್ ಲ್ಯಾಬ್, ಪಶು ರಕ್ತ ಪರಿಶೀಲನೆ, ಶ್ರಸ್ತಚಿಕಿತ್ಸೆ ಸೇರಿದಂತೆ ಹಲವಾರು ರೀತಿ ಹೈಟೆಕ್ ಚಿಕಿತ್ಸೆಯನ್ನು ಜಾನುವಾರಗಳಿಗೆ ನೀಡಬಹುದು. ಆದರೆ ಸ್ಥಳೀಯ ಅಧಿಕಾರಿಗಳ ನಿರ್ಲಕ್ಷದಿಂದಾಗಿ ಇಂದು ಲಕ್ಷಾಂತರ ರೂ. ಅನುದಾನದಲ್ಲಿ ನಿರ್ಮಾಣವಾದ ಪಶು ಪಾಲಿ ಕ್ಲಿನಿಕ್ ಮಾತ್ರ ಹಾಳುಕೊಂಪೆಯಾಗಿದೆ. ಪಶು ಸಂಗೋಪನಾ ಸಚಿವರು ಕೂಡಾ ಬೀದರ್ ಜಿಲ್ಲೆಯವರೇ ಆಗಿದ್ದು, ಈ ಬಗ್ಗೆ ಗಮನ ಹರಿಸಿ ಕ್ಲಿನಿಕ್ ಉದ್ಘಾಟನೆ ಮಾಡುತ್ತಾರಾ ಎಂದು ರೈತರು ಜಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.

Comments

Leave a Reply

Your email address will not be published. Required fields are marked *