ಶಾಹೀನ್ ಶಾಲೆ ವಿರುದ್ಧ ದಾಖಲಿಸಿರುವ ಎಫ್‍ಐಆರ್ ರದ್ದು ಕೋರಿ ಸುಪ್ರೀಂಗೆ ಅರ್ಜಿ

– ದೇಶದ್ರೋಹದ ಕೇಸುಗಳಿಗಾಗಿ ಸಮಿತಿ ರಚಿಸುವಂತೆ ಒತ್ತಾಯ

ನವದೆಹಲಿ: ಬೀದರ್‌ನ ಶಾಹೀನ್ ಶಾಲೆಯಲ್ಲಿ ಸಿಎಎ ನಾಟಕ ಪ್ರದರ್ಶನ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು ದಾಖಲಿಸಿರುವ ಎಫ್‍ಐಆರ್ ರದ್ದು ಗೊಳಿಸುವಂತೆ ಸುಪ್ರೀಂಕೋರ್ಟಿಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.

ಸಾಮಾಜಿಕ ಕಾರ್ಯಕರ್ತೆ ಯೋಗಿತಾ ಭಯಾನಾ ಸುಪ್ರೀಂಕೋರ್ಟಿಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು, ಶಾಲೆಯ ಆಡಳಿತ ಮಂಡಳಿ ಮತ್ತು ಪೋಷಕರ ವಿರುದ್ಧ ದೇಶದ್ರೋಹದ ಸೆಕ್ಷನ್ ಅಡಿ ದಾಖಲಿಸಿರುವ ಎಫ್‍ಐಆರ್ ರದ್ದು ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ.

ಪೋಲಿಸರು ದೇಶದ್ರೋಹದ ಕೇಸ್ ದಾಖಲಿಸಿರುವುದು ಸರಿಯಲ್ಲ. ಇದು ವ್ಯಕ್ತಿಯ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆ ತರುತ್ತದೆ. ಅಷ್ಟೇ ಅಲ್ಲದೆ ಕೆಲವು ರಾಜ್ಯ ಸರ್ಕಾರಗಳು ತಮ್ಮ ಅನುಕೂಲಕ್ಕೆ ಈ ಸೆಕ್ಷನ್ ಬಳಕೆ ಮಾಡಿಕೊಳ್ಳುತ್ತಿವೆ. ಹಾಗಾಗಿ ದೇಶದ್ರೋಹದ ಕೇಸ್ ದಾಖಲು ಮಾಡಿಕೊಳ್ಳುವ ಮುನ್ನ ಘಟನೆಯ ಪೂರ್ವಪರಗಳ ಬಗ್ಗೆ ತನಿಖೆ ನಡೆಯಬೇಕು. ಇದಕ್ಕಾಗಿ ಸಮಿತಿಯೊಂದನ್ನ ರಚಿಸಬೇಕು. ಸಮಿತಿಯೂ ಘಟನೆಯನ್ನು ಅಧ್ಯಯನ ನಡೆಸಿ ಒಪ್ಪಿಗೆ ನೀಡಿದ ಬಳಿಕವಷ್ಟೇ ದೇಶದ್ರೋಹದ ಕೇಸ್ ದಾಖಲಾಗುವಂತೆ ನಿರ್ದೇಶನಗಳನ್ನು ಸುಪ್ರೀಂಕೋರ್ಟ್ ನೀಡಬೇಕು ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಕರ್ನಾಟಕ ಹೈಕೋರ್ಟ್ ನಲ್ಲೂ ಎಫ್‍ಐಆರ್ ರದ್ದು ಕೋರಿ ಸಲ್ಲಿಸಿರುವ ಅರ್ಜಿ ಬಾಕಿ ಇದೆ. ಈ ನಡುವೆ ಅರ್ಜಿ ನಾಳೆ ಸುಪ್ರೀಂಕೋರ್ಟ್ ನಲ್ಲಿ ವಿಚಾರಣೆ ಬರಲಿದೆ.

ಏನಿದು ಪ್ರಕರಣ?
ಜನವರಿ 23 ರಂದು ಪ್ರತಿಷ್ಠಿತ ಶಾಹೀನ್ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಶಾಲಾ ವಾರ್ಷಿಕೋತ್ಸವದಲ್ಲಿ ಪೌರತ್ವ ಕಾಯ್ದೆ ವಿರೋಧಿಸಿ ವಿದ್ಯಾರ್ಥಿಗಳಿಂದ ನಾಟಕ ಮಾಡಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅವಮಾನ ಮಾಡಲಾಗಿತ್ತು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿ ದೇಶಾದ್ಯಂತ ಬಾರಿ ಸುದ್ದಿಯಾದ ಬಳಿಕ ಬಿಜೆಪಿಯ ಯುವ ಮೋರ್ಚಾ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದಾದ ಬಳಿಕ ಪೊಲೀಸರು ತನಿಖೆ ಮಾಡಿ ಸಂಸ್ಥೆಯ ಮುಖ್ಯ ಶಿಕ್ಷಕಿ ಫರಿನಾಭಾನು ಹಾಗೂ ವಿದ್ಯಾರ್ಥಿಯ ತಾಯಿ ನಶೀಮಾ ಎಂಬವರನ್ನು ಪೊಲೀಸರು ಬಂಧಿಸಿದ್ದರು.

ದೇಶದ್ರೋಹದ ಪ್ರಕರಣದಲ್ಲಿ ಬಂಧಿತರಾಗಿದ್ದ ಮುಖ್ಯ ಶಿಕ್ಷಕಿ ಫರಿನಾಭಾನು ಹಾಗೂ ಶಾಲೆಯ ಮಗುವಿನ ತಾಯಿ ನಶೀಮಾ 15 ದಿನಗಳ ಬಳಿಕ ಅಂದ್ರೆ ಫೆಬ್ರವರಿ 14ರಂದು ಕೋರ್ಟ್ ಜಾಮೀನು ನೀಡಿತ್ತು. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಪ್ರಮಾವತಿ ಮನಗೂಳಿ ಅವರು ಜಾಮೀನು ಮಂಜೂರು ಮಾಡಿದ್ದರು. ಫೆಬ್ರವರಿ 11 ರಂದು ಆರೋಪಿಗಳ ಪರವಾಗಿ ಬೆಂಗಳೂರಿನ ಹಿರಿಯ ವಕೀಲರಾದ ಬಿ.ಟಿ ವೆಂಕಟೇಶ್ ಅವರು ವಾದ ಮಂಡಿಸಿದ್ದರು. ಫೆಬ್ರವರಿ 14ರಂದು ಆದೇಶ ಕಾಯ್ದಿರಿಸಿದ್ದ ನ್ಯಾಯಾಲಯ ಜಾಮೀನು ನೀಡಿತ್ತು.

Comments

Leave a Reply

Your email address will not be published. Required fields are marked *