ಸಾಲಮನ್ನಾ ದಾಖಲೆ ತೋರಿಸದಿದ್ರೆ ರೈತರ ಬ್ಯಾಂಕ್ ಖಾತೆಯೇ ಲಾಕ್

-ಹಣ ಪಡೆಯಲು ನಿಲ್ಬೇಕು ಕ್ಯೂ

ಬೀದರ್: ಮಾಜಿ ಸಿಎಂ ಎಚ್.ಡಿ ಕುಮಾರಸ್ವಾಮಿ ಅವರು ರೈತರ ಸಾಲ ಮನ್ನಾ ಘೋಷಣೆ ಮಾಡಿದ್ದರೂ ಭೂತಾಯಿ ಮಕ್ಕಳಿಗೆ ತಮ್ಮ ಅಕೌಂಟ್‍ನಲ್ಲಿರುವ ಹಣದ್ದೇ ಚಿಂತೆಯಾಗಿದೆ. ಯಾಕೆಂದರೆ ಸಾಲಮನ್ನಾಕ್ಕಾಗಿ ಬ್ಯಾಂಕ್ ಅಧಿಕಾರಿಗಳು ರೈತರ ಬ್ಯಾಂಕ್ ಖಾತೆಗಳನ್ನೆ ಲಾಕ್ ಮಾಡುತ್ತಿರುವುದು ರೈತರಿಗೆ ತಲೆನೋವಾಗಿದೆ.

ಎಚ್.ಡಿ ಕುಮಾರಸ್ವಾಮಿ ಅವರು ರೈತರ ಸಾಲಮನ್ನಾ ಯೋಜನೆ ಘೋಷಣೆ ಮಾಡಿದ್ದಾಗ ರಾಜ್ಯದ ರೈತರ ಮೊಗದಲ್ಲಿ ಮಂದಹಾಸ ಮೂಡಿತ್ತು. ಆದರೆ ಈಗ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಹಲಬರ್ಗಾ ವಿಭಾಗದ ಡಿಸಿಸಿ ಬ್ಯಾಂಕ್‍ನ ಅಧಿಕಾರಿಗಳು ಸಾಲಮನ್ನಾ ಹೆಸರಿನಲ್ಲಿ ರೈತರನ್ನು ಭಯ ಬೀಳಿಸುತ್ತಿದ್ದಾರೆ. ಗಡಿ ಜಿಲ್ಲೆಯ ರೈತರು ತಮ್ಮ ಖಾತೆಯಲ್ಲಿರುವ ಹಣ ಪಡೆಯಬೇಕಾದರೆ ಸಾಲಮನ್ನಾ ಆಗಿದೆ ಎಂದು ಸಾಲ ಪಡೆದ ಬ್ಯಾಂಕ್‍ಗಳಿಂದ ಋಣಮುಕ್ತ (ಕ್ಲಿಯರೆನ್ಸ್ ಲೆಟರ್) ಪತ್ರವನ್ನು ಬರಿಸಿಕೊಂಡು ಬರಬೇಕು. ಇಲ್ಲವಾದರೆ ಅವರ ಖಾತೆಯಲ್ಲಿರುವ ಹಣವನ್ನು ಬ್ಯಾಂಕ್ ಅಧಿಕಾರಿಗಳು ನೀಡದೆ ಲಾಕ್ ಮಾಡುತ್ತಿದ್ದಾರೆ.

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳಿಂದ ರೈತರ ಖಾತೆಯಲ್ಲಿ ಸಂಗ್ರಹವಾಗಿರುವ ಹಣವನ್ನು ಏಕಾಏಕಿ ಬ್ಯಾಂಕ್ ಸಿಬ್ಬಂದಿ ಲಾಕ್ ಮಾಡುತ್ತಿದ್ದಾರೆ. ಒಂದು ವೇಳೆ ಖಾತೆಯಲ್ಲಿ ಸಂಗ್ರಹವಾಗಿರುವ ಹಣ ನೀಡಬೇಕು ಎಂದರೆ ಅವರಿಗೆ ಸಾಲಮನ್ನಾ ಆಗಿದೆ ಎನ್ನುವ ಬಗ್ಗೆ ದಾಖಲೆ ತೋರಿಸಬೇಕು. ಇಲ್ಲವಾದರೆ ರೈತರ ಖಾತೆಯನ್ನು ಲಾಕ್ ಮಾಡಲಾಗುತ್ತಿದೆ. ಅಲ್ಲದೆ ಹಲಬರ್ಗಾ ವಿಭಾಗದ ಡಿಸಿಸಿ ಬ್ಯಾಂಕ್‍ನಲ್ಲಿ ಸಿಬ್ಬಂದಿಗಳು ಕೂಡ ಕಡಿಮೆ ಇರುವುದರಿಂದ ಅವರಿಗೆ ಸುತ್ತಮುತ್ತಲ ಹಳ್ಳಿಗಳಿಂದ ಬರುವ ರೈತರಿಗೆ ಸರಿಯಾಗಿ ಸೇವೆ ನೀಡಲು ಆಗುತ್ತಿಲ್ಲ. ಕೇವಲ 1 ಸಾವಿರ ಹಣ ಬೇಕು ಎಂದರೂ ಒಂದು ದಿನ ಸರತಿ ಸಾಲಿನಲ್ಲಿ ನಿಂತುಕೊಳ್ಳಬೇಕಾದ ಪರಿಸ್ಥಿತಿ ಇದೆ.

ಎಚ್‍ಡಿಕೆ ಅವರು ಸಾಲಮನ್ನಾ ಮಾಡಿದ್ದರೂ ಕೂಡ ನಮ್ಮ ಅಕೌಂಟ್‍ನಲ್ಲಿರುವ ಹಣವನ್ನು ಎಲ್ಲಿ ಡಿಸಿಸಿ ಬ್ಯಾಂಕ್ ಅಧಿಕಾರಿಗಳು ವಜಾ ಮಾಡಿಕೊಂಡು ಬಿಡುತ್ತಾರೊ ಎಂಬ ಭಯದಲ್ಲಿ ಗಂಟೆಗಟ್ಟಲೆ ಬ್ಯಾಂಕ್ ಮುಂದೆ ಕ್ಯೂ ನಿಂತು ಹಣ ಪಡೆಯುವ ಹೀನಾಯ ಸ್ಥಿತಿಗೆ ರೈತರು ಬಂದಿದ್ದಾರೆ. ಆದ್ದರಿಂದ ಬ್ಯಾಂಕ್ ಅಧಿಕಾರಿಗಳ ವರ್ತನೆ ಬಗ್ಗೆ ರೈತರೊಬ್ಬರು ಸೆಲ್ಫಿ ವಿಡಿಯೋ ಮಾಡಿ ತಮ್ಮ ನೋವು ಹಂಚಿಕೊಂಡಿದ್ದಾರೆ. ಈ ಬಗ್ಗೆ ಸರ್ಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಗಮನ ಕೊಡಬೇಕು, ರೈತರ ನೆರವಿಗೆ ಬರಬೇಕು ಎಂದು ಮನವಿ ಮಾಡಿಕೊಂಡಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ.

Comments

Leave a Reply

Your email address will not be published. Required fields are marked *