ಭಾರತ್‌ ಜೋಡೊ ನ್ಯಾಯ ಯಾತ್ರೆ ವೇಳೆ ರಾಹುಲ್‌ ಗಾಂಧಿ ಕಾರಿನ ಗಾಜು ಪುಡಿಪುಡಿ

ಕೋಲ್ಕತ್ತ: ಭಾರತ್‌ ಜೋಡೊ ನ್ಯಾಯ ಯಾತ್ರೆಯು (Bharat Jodo Nyay Yatra) ಬಿಹಾರದಿಂದ ಪಶ್ಚಿಮ ಬಂಗಾಳ ಪ್ರವೇಶಿಸುತ್ತಿದ್ದಂತೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿ ಗದ್ದಲ ಸೃಷ್ಟಿಯಾದ್ದರಿಂದ ಕಾಂಗ್ರೆಸ್‌ (Congress) ನಾಯಕ ರಾಹುಲ್‌ ಗಾಂಧಿ (Rahul Gandhi) ಅವರ ಕಾರಿನ ಹಿಂಬದಿಯ ಗಾಜು ಪುಡಿಯಾಗಿರುವ ಘಟನೆ ನಡೆದಿದೆ.

ರಾಹುಲ್‌ ಗಾಂಧಿ ನೇತೃತ್ವದ ಯಾತ್ರೆಯನ್ನು ವೀಕ್ಷಿಸಲು, ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯ ಲಾಭಾ ಸೇತುವೆಗೆ ಸಾವಿರಾರು ಜನರು ಸೇರಿದ್ದರು. ಈ ವೇಳೆ ರಾಹುಲ್‌ ಗಾಂಧಿ ಇದ್ದ ಕಾರಿನ ಗಾಜು ಒಡೆದಿದೆ. ಘಟನೆ ನಡೆದಾಗ ಕಾಂಗ್ರೆಸ್‌ ನಾಯಕ ಬಸ್ಸಿನಲ್ಲಿದ್ದರು ಎನ್ನಲಾಗಿದೆ. ಇದು ಭದ್ರತಾ ಲೋಪ ಎಂದು ಕಾಂಗ್ರೆಸ್‌ ನಾಯಕರು ಆರೋಪಿಸಿದ್ದಾರೆ. ಇದನ್ನೂ ಓದಿ: ಅಡ್ಡಿಪಡಿಸುವವರನ್ನು ಯಾರೂ ನೆನಪಿಸಿಕೊಳ್ಳಲ್ಲ: ಅಧಿವೇಶನಕ್ಕೂ ಮುನ್ನ ಸಂಸದರಿಗೆ ಮೋದಿ ಸಲಹೆ

ಮಾಲ್ಡಾದಲ್ಲಿ ಮಮತಾ ಬ್ಯಾನರ್ಜಿ ಅವರಿಗೆ ಹೆಚ್ಚಿನ ಭದ್ರತೆಗೆ ಗಮನ ಕೇಂದ್ರೀಕರಿಸಲಾಗಿದೆ. ಈ ಸಮಾರಂಭಕ್ಕೆ ಕೆಲವೇ ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಎಂದು ಹಿರಿಯ ಕಾಂಗ್ರೆಸ್ ನಾಯಕರೊಬ್ಬರು ಟೀಕಿಸಿದ್ದಾರೆ.

ರಾಹುಲ್ ಗಾಂಧಿಯವರ ಯಾತ್ರೆ ಹೊರಟಿರುವ ಮಣಿಪುರ, ಅಸ್ಸಾಂ, ಮೇಘಾಲಯ, ಬಿಹಾರ, ಪಶ್ಚಿಮ ಬಂಗಾಳದಂತಹ ಎಲ್ಲಾ ರಾಜ್ಯಗಳಲ್ಲಿ ಕಾಂಗ್ರೆಸ್ ಸರ್ಕಾರವಿಲ್ಲ. ಕೆಲವೆಡೆ ರಾಹುಲ್ ಪೋಸ್ಟರ್ ಹರಿದಿದೆ. ಮತ್ತೊಂದು ಕಡೆ ಅವರ ಕಾರಿನ ಗಾಜು ಒಡೆದಿದೆ. ಒಂದಂತೂ ಸ್ಪಷ್ಟ. ಏನೇ ಆಗಲಿ ಯಾತ್ರೆ ನಿಲ್ಲುವುದಿಲ್ಲ. ಇದು ಮುಂದುವರಿಯಲಿದೆ ಎಂದು ಕಾಂಗ್ರೆಸ್ ವಕ್ತಾರ ಜೈರಾಮ್ ರಮೇಶ್ ಹೇಳಿದ್ದಾರೆ. ಇದನ್ನೂ ಓದಿ: ದೇವಾಲಯದ ಆವರಣದಲ್ಲಿ ಮಾಂಸಾಹಾರ ಸೇವನೆ – ಇದು ಪಿಕ್ನಿಕ್‌ ಸ್ಪಾಟ್‌ ಅಲ್ಲ ಎಂದು ಕೋರ್ಟ್‌ ಗರಂ

ಇದಕ್ಕೂ ಮುನ್ನ ಪಶ್ಚಿಮ ಬಂಗಾಳದ ಆಡಳಿತವು ರಾಹುಲ್ ಗಾಂಧಿಗೆ ಮಾಲ್ಡಾ ಜಿಲ್ಲೆಯ ಭಾಲುಕಾ ನೀರಾವರಿ ಬಂಗಲೆಯಲ್ಲಿ ತಂಗಲು ಅನುಮತಿ ನಿರಾಕರಿಸಿತ್ತು. ನಂತರ ಕಾಂಗ್ರೆಸ್ ಯಾತ್ರೆಯ ವೇಳಾಪಟ್ಟಿಯನ್ನು ಬದಲಾಯಿಸಲಾಯಿತು.