ಪ್ರೀತಿ, ದ್ವೇಷಗಳ ಭರಾಟೆಯ ಟ್ರೈಲರ್ ನೋಡಿದ್ರೆ ಆಗುತ್ತೆ ರೋಮಾಂಚನ

-ಚಕಿತಗೊಳಿಸುತ್ತೆ ಭರಾಟೆಯಲ್ಲಿ ಶ್ರೀಮುರಳಿಯ ಅಬ್ಬರ

ಬೆಂಗಳೂರು: ಚಂದನವನದಲ್ಲಿ ಸದ್ಯ ಸದ್ದು ಮಾಡುತ್ತಿರುವ ಚಿತ್ರ ಭರಾಟೆ. ಹಲವು ಹೊಸತನಗಳೊಂದಿಗೆ ಮೂಡಿಬಂದಿರುವ ಭರಾಟೆ ಬಿಡುಗಡೆಗೆ ಸಿದ್ಧಗೊಂಡಿದೆ. ಚಿತ್ರತಂಡ ಸಹ ಸಿನಿಮಾ ಪ್ರಚಾರದಲ್ಲಿ ತೊಡಗಿಕೊಂಡಿದೆ. ಟ್ರೈಲರ್, ಫೋಟೋ ಮತ್ತು ಹಾಡುಗಳ ಮೂಲಕ ತನ್ನತ್ತ ಸೆಳೆದುಕೊಂಡಿದ್ದ ಭರಾಟೆ ಇಂದು ಅಭಿಮಾನಿಗಳಿಗೆ ಮತ್ತೊಂದು ಟ್ರೈಲರ್ ಬಿಡುಗಡೆಗೊಳಿಸಿದೆ. ವೀಕೆಂಡ್ ಗೆ ಕನ್ನಡಾಭಿಮಾನಿಗಳಿಗೆ ಮಾಸ್ ಟ್ರೈಲರ್ ನ್ನು ಕಲರ್‍ಫುಲ್ ಬಾಡೂಟವಾಗಿ ಉಣಬಡಿಸಿದೆ.

ಭರಾಟೆಯ ಅಬ್ಬರಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಸಂಚಲನವೇ ಸೃಷ್ಟಿಯಾಗಿದೆ. ಸಿನಿಮಾದ ಹಲವು ಆಯಾಮಗಳನ್ನು ತೋರಿಸಿರುವ ಚಿತ್ರತಂಡ ಎಲ್ಲಿಯೂ ಕಥೆಯ ಸಣ್ಣ ಎಳೆಯನ್ನು ಬಿಟ್ಟುಕೊಡದೇ ವೀಕ್ಷಕರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಸಿನಿಮಾ ಸೆಟ್ಟೇರಿದಾಗಿನಿಂದಲೂ ಕೆಲ ಫೋಟೋಗಳನ್ನು ರಿವೀಲ್ ಗೊಳಿಸುತ್ತಾ ಬಂದ ಚಿತ್ರತಂಡ ಇಂದು ಫ್ರೂಟ್ ಸಲಾಡ್ ನೀಡಿದೆ. ಟ್ರೈಲರ್ ಎಲ್ಲ ವರ್ಗದ ಜನರನ್ನು ಸೆಳೆಯುವ ಶಕ್ತಿ ಹೊಂದಿದೆ ಎಂಬ ಮಾತುಗಳೇ ಈಗಾಗಲೇ ಗಾಂಧಿನಗರದಲ್ಲಿ ಕೇಳಿ ಬರುತ್ತಿವೆ.

ಟ್ರೈಲರ್ ಮಾಸ್, ಫ್ಯಾಮಿಲಿ, ಲವ್, ಕಾಮಿಡಿ ಹದವಾದ ಮಿಶ್ರಣದಂತಿದ್ದು, ದೊಡ್ಡ ತಾರಾಬಳಗವನ್ನೇ ಭರಾಟೆ ಹೊಂದಿದೆ. ಬಹುತೇಕ ಚಿತ್ರದ ಎಲ್ಲ ಕಲಾವಿದರನ್ನು ಪರಿಚಯಿಸುವ ನಿರ್ದೇಶಕ ಪ್ರಯತ್ನ ಕಾಣಬಹುದಾಗಿದೆ. ಹಾಡುಗಳು, ಮ್ಯೂಸಿಕ್ ಒಂದು ರೀತಿ ನೋಡುಗನನ್ನು ಸಮ್ಮೋಹನಗೊಳಿಸುವಂತಿದೆ. ಚಿತ್ರದ ಸೆಟ್, ವಸ್ತ್ರಾಲಂಕಾರ ಎಲ್ಲವೂ ಭಿನ್ನವಾಗಿದ್ದು, ಯುವ ಆವೇಗದ ಕಥಾ ಹಂದರದ ಮೂಲಕವೇ ಪ್ರಸಿದ್ಧಿ ಪಡೆದಿರೋ ಚೇತನ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಭರಾಟೆ ಕಥೆಯನ್ನಂತೂ ರೋರಿಂಗ್ ಸ್ಟಾರ್ ಶ್ರೀಮುರಳಿಯ ಇಮೇಜಿಗೆ ತಕ್ಕುದಾಗಿಯೇ ಅವರು ಹೊಸೆದಿದ್ದಾರೆ. ಅದಕ್ಕೆ ತಕ್ಕುದಾದಂಥಾ ದೃಶ್ಯ ರೂಪವನ್ನೂ ನೀಡಿದ್ದಾರೆ.

ಭರಾಟೆಯಲ್ಲಿ ಸಾಯಿಕುಮಾರ್, ರವಿಶಂಕರ್, ಅಯ್ಯಪ್ಪ ಮೂವರು ಸಹೋದರರು ಒಂದೇ ಚಿತ್ರದಲ್ಲಿ ಮೊದಲ ಬಾರಿಗೆ ನಟಿಸಿದ್ದಾರೆ. ಮೂವರು ಖಡಕ್ ಡೈಲಾಗ್, ಖದರ್ ಭರಾಟೆಯಲ್ಲಿ ಅಬ್ಬರಿಸುತ್ತಿದೆ. ಕ್ಲೈಮಾಕ್ಸ್ ಸಾಹಸ ದೃಶ್ಯಕ್ಕೆ 10 ಜನ ವಿಲನ್ಸ್ ಗಳು ಮೊದಲ ಬಾರಿಗೆ ಒಂದೇ ಚಿತ್ರದಲ್ಲಿ ಅಭಿನಯಿಸಿ ಆರ್ಭಟಿಸುತ್ತಿದ್ದಾರೆ. ಸಾಯಿಕುಮಾರ್, ರವಿಶಂಕರ್, ಅಯ್ಯಪ್ಪ, ಅವಿನಾಶ್, ಶರತ್ ಲೋಹಿತಾಶ್ವ, ಉಗ್ರಂ ಮಂಜು, ನೀನಾಸಂ ಅಶ್ವತ್ಥ್, ದೀಪಕ್, ರಾಜವಾಡೆ ಮತ್ತು ಮನಮೋಹನ್ ಕ್ಲೈಮ್ಯಾಕ್ಸ್ ದೃಶ್ಯಗಳಲ್ಲಿ ಅಬ್ಬರಿಸಿದ್ದಾರೆ.

Comments

Leave a Reply

Your email address will not be published. Required fields are marked *