ಲಕ್ಷ ಲಕ್ಷ ಬೆಟ್ಟಿಂಗ್ ಕಟ್ಟಿಕೊಂಡು 2 ಶಿಫ್ಟ್‌ನಲ್ಲಿ ಜೂಜಾಟ

ತುಮಕೂರು: ಬರದ ನಾಡು ತುಮಕೂರು ಜಿಲ್ಲೆ ಪಾವಗಡ ತಾಲೂಕಿನಲ್ಲಿ ನೀರಿಗೆ ಬರ ಇದ್ದರೂ ಜೂಜಿಗೆ ಮಾತ್ರ ಬರ ಇಲ್ಲ. ಯಾರ ಭಯವೂ ಇಲ್ಲದೆ ಈ ತಾಲೂಕಿನಲ್ಲಿ ಜೂಜಾಟ ಅವ್ಯಾಹತವಾಗಿ ನಡೆಯುತ್ತಿದೆ.

ಲಕ್ಷ ಲಕ್ಷ ದುಡ್ಡು ಪಣಕಿಟ್ಟು ಜೂಜಾಡುತಿದ್ದಾರೆ. ಶೈಲಾಪುರ ಗ್ರಾಮದಲ್ಲಂತೂ ಪೊಲೀಸರ ನೆರಳಿನಲ್ಲೇ ದಂಧೆ ನಡೆಯುತ್ತಿದೆ ಎನ್ನಲಾಗಿದೆ. ಶೈಲಾಪುರದ ಹೊಲದಲ್ಲಿ ನಡೆಯುತ್ತಿದ್ದ ಜೂಜು ಅಡ್ಡೆಯ ದೃಶ್ಯ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

ಯಾರ ಕಡಿವಾಣವಿಲ್ಲದೇ ಲಕ್ಷ ಲಕ್ಷ ಬೆಟ್ಟಿಂಗ್ ಕಟ್ಟಿಕೊಂಡು ಗುಂಪು ಗುಂಪಾಗಿ ಜೂಜು ಆಡುತ್ತಿದ್ದಾರೆ. ಅಲ್ಲದೇ ಶಿಫ್ಟ್ ಲೆಕ್ಕದಲ್ಲಿ ಇಲ್ಲಿ ಜೂಜಾಟ ನಡೆಯುತ್ತದೆ. ಬೆಳಿಗ್ಗೆ 9 ರಿಂದ 12 ಮತ್ತೆ 2 ರಿಂದ 6 ಎರಡು ಶಿಫ್ಟ್‌ನಲ್ಲಿ ಜೂಜಾಟ ನಡೆಯುತ್ತಿದೆ. ಅರಸೀಕೆರೆ ಠಾಣಾ ವ್ಯಾಪ್ತಿಗೆ ಸೇರುವ ಶೈಲಾಪುರದಲ್ಲಿ ನಡೆಯುವ ಜೂಜಿಗೆ ಇಲ್ಲಿಯ ಪೊಲೀಸರೇ ನೆರಳಾಗಿ ನಿಂತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.

ನಿರಂತರ ಬರದಿಂದಾಗಿ ಬಡತನ ಎದುರಿಸುತ್ತಿರುವ ಪಾವಗಡ ಜನರು ಜೂಜಾಟ ದಂಧೆಯಿಂದಾಗಿ ಇನ್ನಷ್ಟು ಕಂಗಾಲಾಗಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕಾದ ಜಿಲ್ಲಾ ಪೊಲೀಸ್ ಇಲಾಖೆ ದಿವ್ಯಮೌನ ವಹಿಸಿದಂತೆ ಕಾಣುತ್ತಿದೆ. ಅರಸೀಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಜೂಜು ಅವ್ಯಾಹತವಾಗಿ ನಡೆಯುತ್ತಿದೆ.

Comments

Leave a Reply

Your email address will not be published. Required fields are marked *