ಮೈಸೂರು, ಹಾಸನ, ಬೆಂಗ್ಳೂರು ನಡುವೆ ಓಡಾಡುವ 126 KSRTC ಬಸ್ಸುಗಳ ಸಂಚಾರ ಸ್ಥಗಿತ

ಬೆಂಗಳೂರು: ಸಾರಿಗೆ ಸಚಿವ ಲಕ್ಷ್ಮಣ ಸವದಿ ಸೂಚನೆಯಂತೆ 4ರಿಂದ 5 ಮಂದಿ ಅಥವಾ ಬೆರಳೆಣಿಕೆಯ ಪ್ರಯಾಣಿಕರನ್ನ ಹೊತ್ತು ಸಂಚರಿಸುವ ಬಸ್ಸುಗಳ ಸೇವೆಯನ್ನು ಕೆಎಸ್ಆರ್‌ಟಿಸಿ ರದ್ದುಪಡಿಸಿದೆ.

ಕೆಎಸ್ಆರ್‌ಟಿಸಿ ಈಗಾಗಲೇ ನಷ್ಟದಲ್ಲಿದ್ದು, ಇಂಧನಕ್ಕೆ ಮತ್ತು ಬಸ್ಸುಗಳ ನಿರ್ವಹಣೆ ಮಾಡುವುದೇ ಕಷ್ಟವಾಗಿದೆ. ಆದ್ದರಿಂದ ಸಾರಿಗೆ ಸಚಿವರ ಸೂಚನೆಯಂತೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ. ಕಳಸದ ಅವರು ಎಲ್ಲಾ ವಿಭಾಗದ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿ ಒಟ್ಟು 126 ಬಸ್ಸುಗಳ ಸಂಚಾರ ರದ್ದುಗೊಳಿಸಿದ್ದಾರೆ.

ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣ ಹಾಗೂ ಸ್ಯಾಟಲೈಟ್ ನಿಲ್ದಾಣದಲ್ಲಿ ಕೆಲ ಚಾಲಕ, ನಿರ್ವಾಹಕರು ಕೆಲ ಬಸ್‍ಗಳಲ್ಲಿ 4ರಿಂದ 5 ಜನ ಪ್ರಯಾಣಿಕರಿದ್ದರೆ ಸಾಕು ಎಂದು ಬಸ್ಸಿನಲ್ಲಿ ಸಂಚರಿಸುತ್ತಾರೆ. ಜೊತೆಗೆ ಪ್ಲಾಟ್ ಫಾರಂನಲ್ಲಿ ಬಸ್ ನಿಲ್ಲಿಸುವ ಜಾಗಕ್ಕಾಗಿ ಚಾಲಕರ ನಡುವೆ ಜಗಳ ನಡೆಯುತ್ತಲೇ ಇರುತ್ತದೆ. ಇದನ್ನು ಮನಗಂಡ ಕೆಎಸ್ಆರ್‌ಟಿಸಿ ಮೈಸೂರು-ಬೆಂಗಳೂರು ಮತ್ತು ಹಾಸನ-ಬೆಂಗಳೂರು ನಡುವಿನ 126 ಬಸ್ಸುಗಳ ಸಂಚಾರವನ್ನು ಸ್ಥಗಿತಗೊಳಿಸಿದೆ.

ಮೊದಲ ಹಂತದಲ್ಲಿ ಮೈಸೂರು-ಬೆಂಗಳೂರು, ಹಾಸನ-ಬೆಂಗಳೂರು ಮಾರ್ಗದಲ್ಲಿ ಖಾಲಿ ಸಂಚರಿಸುವ ಬಸ್ಸುಗಳ ಸೇವೆಯನ್ನು ರದ್ದು ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಮಾರ್ಗಗಳಿಗೂ ಇದು ಅನ್ವಯಗೊಳ್ಳುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *