ಕುಮಾರಪರ್ವತದಲ್ಲಿ ನಾಪತ್ತೆ – ತೀರ್ಥದ ಪೈಪ್‍ನಿಂದಾಗಿ ಕುಕ್ಕೆ ಸೇರಿದ ಬೆಂಗ್ಳೂರು ಯುವಕ

ಮಡಿಕೇರಿ: ಟ್ರೆಕ್ಕಿಂಗ್‍ಗೆ ಬಂದ 12 ಯುವಕರ ತಂಡದಲ್ಲಿ ನಾಪತ್ತೆಯಾಗಿದ್ದ ಬೆಂಗಳೂರಿನ ಗಾಯತ್ರಿ ನಗರದ ಯುವಕ ಸುರಕ್ಷಿತವಾಗಿ ಪತ್ತೆಯಾಗಿದ್ದಾರೆ.

ಕೊಡಗು ಜಿಲ್ಲೆಯ ಪುಷ್ಪಗಿರಿ ಬೆಟ್ಟದಲ್ಲಿ ದಾರಿ ತಪ್ಪಿರುವ 25 ವರ್ಷದ ಸಂತೋಷ್ ಇಂದು ಮಧ್ಯಾಹ್ನ 12.30ರ ಸುಮಾರಿಗೆ ದಕ್ಷಿಣ ಕನ್ನಡ ಜಿಲ್ಲೆಯ ಆದಿ ಸುಬ್ರಹ್ಮಣ್ಯದ ಬಳಿಯಿಂದಾಗಿ ಕುಕ್ಕೆ ಸುಬ್ರಹ್ಮಣ್ಯ ತಲುಪಿದ್ದಾರೆ.

ಕುಕ್ಕೆ ಸೇರಿದ್ದು ಹೇಗೆ?
ಕುಮಾರಪರ್ವತ ಬಳಿಯ ಗುಡ್ಡದಿಂದ ದೇವಾಲಯಕ್ಕೆ ತೀರ್ಥದ ಉದ್ದೇಶದಿಂದ ಪೈಪ್ ಲೈನ್ ಅಳವಡಿಸಲಾಗಿತ್ತು. ಈ ಪೈಪ್ ಅನ್ನು ದಾರಿ ಸೂಚಕವಾಗಿ ಬಳಸಿ ಮತ್ತೆ ಸುಬ್ರಹ್ಮಣ್ಯ ತಲುಪಿದೆ ಎಂದು ಸಂತೋಷ್ ತಿಳಿಸಿದ್ದಾರೆ. ಸಂತೋಷ್ ವಾಪಸ್ ಬಂದ ಕೂಡಲೇ ಸ್ಥಳೀಯರು ಅವರಿಗೆ ನೀರು, ಹಣ್ಣು ನೀಡಿ ಉಪಚರಿಸಿದ್ದಾರೆ.

ನಾಪತ್ತೆಯಾಗಿದ್ದು ಹೇಗೆ?
ಬೆಂಗಳೂರಿನಿಂದ 12 ಮಂದಿ ಯುವಕರ ತಂಡವೊಂದು ಭಾನುವಾರ ಬೆಳಗ್ಗೆ 7 ಗಂಟೆ ಸುಮಾರಿಗೆ ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಂದಿದೆ. ಹೀಗೆ ಬಂದ ತಂಡ ಸುಬ್ರಮಣ್ಯದ ಗಿರಿಗದ್ದೆಯಿಂದ ಕುಮಾರಪರ್ವತದ ಮೂಲಕ ಸೋಮವಾರಪೇಟೆ ತಾಲೂಕಿನ ಪುಷ್ಪಗಿರಿ ಬೆಟ್ಟಕ್ಕೆ ತೆರಳಿತ್ತು. ಬೆಳಗ್ಗೆ 11 ಗಂಟೆ ಸುಮಾರಿಗೆ ಶೇಷ ಪರ್ವತಕ್ಕೆ ತಲುಪಿದ 12 ಮಂದಿ ಯುವಕರು ಅಲ್ಲಿಂದ ಹಿಂದಿರುಗಿ ಗಿರಿಗದ್ದೆಗೆ ಬಂದಿದ್ದಾರೆ. ಅಲ್ಲಿ ಮಧ್ಯಾಹ್ನದ ಊಟ ಮುಗಿಸಿ ಸುಬ್ರಹ್ಮಣ್ಯ ಕಡೆ ಪ್ರಯಾಣಿಸಿದ್ದಾರೆ. ಈ ವೇಳೆ 12 ಮಂದಿಯ ತಂಡ 6 ಮಂದಿಯಂತೆ 2 ವಿಭಾಗಗಳಾಗಿದೆ. ಇದರಲ್ಲಿ 6 ಜನರ ತಂಡ ಮೊದಲು ಆಗಮಿಸಿತ್ತು. ಸ್ವಲ್ಪ ಸಮಯದ ಬಳಿಕ ಗಿರಿಗದ್ದೆ ಮನೆಯಿಂದ ಉಳಿದ 6 ಜನರ ತಂಡ ಸುಬ್ರಹಣ್ಯಕ್ಕೆ ಬರುತ್ತಿದ್ದ ಸಂದರ್ಭದಲ್ಲಿ ಜೋರಾಗಿ ಮಳೆ ಸುರಿಯಲಾರಂಭಿಸಿದೆ. ಈ ವೇಳೆ ಸಂತೋಷ್ ತನ್ನ ಜಾಕೆಟ್ ತೆಗೆದು ರೈನ್ ಕೋಟ್ ಹಾಕಿಕೊಂಡಿದ್ದಾರೆ. ಅಲ್ಲಿಯವರೆಗೆ ಸ್ನೇಹಿತರ ಜೊತೆಗಿದ್ದ ಸಂತೋಷ್ ಆ ಬಳಿಕದಿಂದ ಕಾಣೆಯಾಗಿದ್ದರು.

ತಮ್ಮ ತಂಡದಲ್ಲಿ ಸಂತೋಷ್ ಇಲ್ಲದಿರುವುದನ್ನು ಗಮನಿಸಿದ ಇತರ ಸ್ನೇಹಿತರು ಕೂಡಲೇ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇತ್ತ ಈ ಕುರಿತು ಮಾಹಿತಿ ಪಡೆದ ಪುಷ್ಪಗಿರಿ ವನ್ಯಜೀವಿ ವಿಭಾಗದ ಸಿಬ್ಬಂದಿ ಭಾನುವಾರ ಸಂಜೆಯಿಂದ ತೀವ್ರ ಶೋಧಕಾರ್ಯ ನಡೆಸಿದ್ದರು.

Comments

Leave a Reply

Your email address will not be published. Required fields are marked *