ಬೆಂಗ್ಳೂರು ಯುವಕನನ್ನು ಮಂಡ್ಯದಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದ್ರು

ಮಂಡ್ಯ: ಹಾಡುಹಗಲೇ ನಡುರಸ್ತೆಯಲ್ಲಿ ಬೆಂಗಳೂರು ಯುವಕನೋರ್ವನನ್ನು ಮಂಡ್ಯದ ನಾಗಮಂಗಲ ತಾಲೂಕಿನ ಕಾಚೇನಹಳ್ಳಿ-ಅಂಚೆಚಿಟ್ಟನಹಳ್ಳಿ ಬಳಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ.

ಬೆಂಗಳೂರಿನ ರಾಜಾಜಿನಗರದ 22 ವರ್ಷದ ಭರತ್ ಮೃತ ದುದೈರ್ವಿ. ಭರತ್ ಜೊತೆಗಿದ್ದ ಆತನ ಸ್ನೇಹಿತ ಮುನಿರಾಜು ಎಂಬವರಿಗೆ ಗಂಭೀರ ಗಾಯಗಳಾಗಿದ್ದು, ಬಿ.ಜಿ ನಗರದ ಎಐಎಂಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ನಡೆದಿದ್ದೇನು?: ಇಂದು ಮಧ್ಯಾಹ್ನ ಭರತ್, ಮುನಿರಾಜು ಪಲ್ಸರ್ ಬೈಕಿನಲ್ಲಿ, ಮತ್ತಿಬ್ಬರು ಸ್ನೇಹಿತರು ಬೇರೊಂದು ಬೈಕಿನಲ್ಲಿ ಚಾಮರಾಜನಗರ-ಜೇವರ್ಗಿ ಹೆದ್ದಾರಿಯಲ್ಲಿ ಬರುತ್ತಿದ್ದರು. ಈ ವೇಳೆ ಎರಡು ಕಾರಿನಲ್ಲಿ ಬಂದ ದುಷ್ಕರ್ಮಿಗಳು ಪಲ್ಸರ್ ಬೈಕಿಗೆ ಡಿಕ್ಕಿ ಹೊಡೆದಿದ್ದು, ನಂತರ ರಸ್ತೆ ಮೇಲೆ ಬಿದ್ದ ಭರತ್‍ನನ್ನು ಮಾರಾಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಜೊತೆಗೆ ಮುನಿರಾಜು ಮೇಲೆಯೂ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ.

ಸ್ಥಳೀಯರ ಮಾಹಿತಿ ಮೇರೆಗೆ ಸ್ಥಳಕ್ಕಾಗಮಿಸಿದ ಡಿವೈಎಸ್ಪಿ ಚಂದ್ರಶೇಖರ್, ಸಿಪಿಐ ಧನರಾಜ್ ಪರಿಶೀಲನೆ ನಡೆಸಿದ್ದಾರೆ. ಭರತ್ ಜೊತೆಗಿದ್ದ ಇಬ್ಬರು ಸ್ನೇಹಿತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ನಾಗಮಂಗಲ ಗ್ರಾಮಾಂತರ ಪೊಲೀಸರು ದುಷ್ಕರ್ಮಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

 

Comments

Leave a Reply

Your email address will not be published. Required fields are marked *