ಬೆಳ್ಳಂಬೆಳಗ್ಗೆ ಕಂಠಪೂರ್ತಿ ಮದ್ಯ ಕುಡಿದು ಮಿನಿ ಬಸ್ ಚಾಲನೆ- 4 ಆಟೋ, ಬೈಕ್ ಜಖಂ

– ತಪ್ಪಿದ ಭಾರೀ ಅನಾಹುತ, ಮೂವರಿಗೆ ಗಂಭೀರ ಗಾಯ
– ಮಿನಿ ಬಸ್ ಚಾಲಕನನ್ನು ವಶಕ್ಕೆ ಪಡೆದ ಪೊಲೀಸ್

ಬೆಂಗಳೂರು: ಬೆಳ್ಳಂಬೆಳಗ್ಗೆ ಕಂಠಪೂರ್ತಿ ಮದ್ಯ ಕುಡಿದು ಮಿನಿ ಬಸ್ ಚಾಲಕನೊಬ್ಬ ಸರಣಿ ಅಪಘಾತ ನಡೆಸಿರುವ ಘಟನೆ ಬೆಂಗಳೂರಿನ ಯಶವಂತಪುರ ರೈಲ್ವೆ ಸ್ಟೇಷನ್ ಬಳಿ ನಡೆದಿದೆ.

ವೆಂಕಟರಮಣಪ್ಪ ಮದ್ಯ ಕುಡಿದು ಮಿನಿ ಬಸ್ ಓಡಿಸಿದ ಚಾಲಕ. ಘಟನೆಯಲ್ಲಿ ಆಟೋ ಚಾಲಕರೊಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಯಶವಂತಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಿನಿ ಬಸ್ ಚಾಲಕ ವೆಂಕಟರಮಣಪ್ಪ ಬೆಳಗ್ಗೆ ಎಂಟು ಗಂಟೆ ಸುಮಾರಿಗೆ ಪೀಣ್ಯ ಕಡೆಯಿಂದ ಯಶವಂತಪುರ ಕಡೆ ವೇಗವಾಗಿ ಹೋಗುತ್ತಿದ್ದ. ಆದರೆ ಯಶವಂತಪುರ ರೈಲ್ವೆ ನಿಲ್ದಾಣದ ಬಳಿ ಚಾಲಕನ ನಿಯಂತ್ರಣ ತಪ್ಪಿದ ಮಿನಿ ಬಸ್ ಆಟೋ ಸ್ಟ್ಯಾಂಡ್‍ಗೆ ನುಗ್ಗಿತ್ತು. ಪರಿಣಾಮ ನಾಲ್ಕು ಆಟೋ ಹಾಗೂ ಒಂದು ಬೈಕ್ ಜಖಂಗೊಂಡಿದ್ದು, ಮೂವರಿಗೆ ಗಂಭೀರ ಗಾಯಗಳಾಗಿವೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಆಟೋ ಸ್ಟ್ಯಾಂಡ್‍ನಲ್ಲಿದ್ದ ಚಾಲಕರು ಮಿನಿ ಬಸ್ ಚಾಲಕ ವೆಂಕಟರಮಣಪ್ಪನನ್ನ ವಶಕ್ಕೆ ಪಡೆದು ವಿಚಾರಿಸಿದಾಗ ಎಣ್ಣೆ ಹೊಡೆದಿರುವುದು ಖಚಿತವಾಗಿತ್ತು. ಈ ಸಂಬಂಧ ಆಟೋ ಚಾಲಕರು ಯಶವಂತಪುರ ಸಂಚಾರಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ತಕ್ಷಣವೇ ಸ್ಥಳಕ್ಕೆ ಬಂದ ದೌಡಾಯಿಸಿದ ಪೊಲೀಸರು ವೆಂಕಟರಮಣಪ್ಪನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದರು. ಬಳಿಕ ವೆಂಕಟರಣಪ್ಪನನ್ನು ಆಸ್ಪತ್ರೆಗೆ ಕರೆದೊಯ್ದು ಆಲ್ಕೋ ಹಾಲ್ ಪರಿಶೀಲನೆ ಮಾಡಿಸಿದಾಗ ಆರೋಪಿಯು ಮದ್ಯ ಸೇವಿಸಿದ್ದು ದೃಡಪಟ್ಟಿದೆ. ಹೀಗಾಗಿ ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.

Comments

Leave a Reply

Your email address will not be published. Required fields are marked *