ಬೆಂಗಳೂರು ವಿವಿಗೆ ಮನಮೋಹನ್ ಸಿಂಗ್ ಹೆಸರು – ಸಂಪುಟ ಸಭೆಯಲ್ಲಿ ಹಲವು ಐತಿಹಾಸಿಕ ನಿರ್ಣಯ

– 3,400 ಕೋಟಿ ಮೊತ್ತದ ಯೋಜನೆಗಳಿಗೆ ಆಡಳಿತಾತ್ಮಕ ಅನುಮೋದನೆ

ಚಿಕ್ಕಬಳ್ಳಾಪುರ: ನಂದಿಬೆಟ್ಟದಲ್ಲಿಂದು (Nandi Hills) ನಡೆದ ಸಚಿವ ಸಂಪುಟ ಸಭೆಯಲ್ಲಿ ಕೆಲವೊಂದು ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ಬೆಂಗಳೂರು ಉತ್ತರ ಅಂತ ಮರು ನಾಮಕರಣ ಮಾಡಲಾಗಿದೆ. ಇದರೊಂದಿಗೆ ಜೊತೆಗೆ ಬೆಂಗಳೂರು ನಗರ ವಿಶ್ವವಿದ್ಯಾಲಯಕ್ಕೆ (Bengaluru University) ಡಾ. ಮನಮೋಹನ್ ಸಿಂಗ್ ಹೆಸರಿಡಲಾಗಿದೆ.

3,400 ಕೋಟಿ ರೂ. ಮೊತ್ತದ ಆಡಳಿತಾತ್ಮಕ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಕೋಲಾರ, ಚಿಕ್ಕಬಳ್ಳಾಪುರ (Chikkaballapura), ಹಾಸನ, ತುಮಕೂರು, ಬೆಂಗಳೂರು ಗ್ರಾಮಾಂತರ ಕುಡಿಯುವ ನೀರು ಯೋಜನೆಗೆ 23,251 ಕೋಟಿ ವೆಚ್ಚಕ್ಕೆ ಸರ್ಕಾರ ಮುಂದಾಗಿದೆ. ಇದುವರೆಗೆ 17,147 ಕೋಟಿ ವೆಚ್ಚವಾಗಿದ್ದು, ಹೆಚ್ಚುವರಿಯಾಗಿ 6,103 ಕೋಟಿ ಖರ್ಚಿಗೆ ಸರ್ಕಾರ ಮುಂದಾಗಿದೆ. ಇದನ್ನೂ ಓದಿ: ಬೆಂಗಳೂರು ಗ್ರಾಮಾಂತರ ಇನ್ನು ಮುಂದೆ ಬೆಂಗಳೂರು ಉತ್ತರ ಜಿಲ್ಲೆ

ಚಿಂತಾಮಣಿಯಲ್ಲಿ ಮೊರಾರ್ಜಿ ಶಾಲೆ ಆರಂಭಕ್ಕೆ ಸರ್ಕಾರ ನಿರ್ಧರಿಸಿದ್ದು, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೇ ಯೋಜನೆ ಪೂರ್ಣಕ್ಕೆ ಸರ್ಕಾರ ಉದ್ದೇಶಿಸಿದೆ. ಇದನ್ನೂ ಓದಿ: 5 ವರ್ಷ ನಾನೇ ಸಿಎಂ, ನಮ್ಮ ಸರ್ಕಾರ ಬಂಡೆ ತರ ಇರುತ್ತೆ: ಸಿದ್ದರಾಮಯ್ಯ

ಪ್ರಮುಖ ನಿರ್ಣಯಗಳೇನು?
* ಆರೋಗ್ಯ ಇಲಾಖೆ ವತಿಯಿಂದ 46 ಕೋಟಿ ರೂ. ವೆಚ್ಚದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಸಮುದಾಯ ಆರೋಗ್ಯ ಕೇಂದ್ರಗಳಾಗಿ ಅಭಿವೃದ್ಧಿಪಡಿಸಲು ಹಾಗೂ 21.40 ಕೋಟಿ ರೂ. ವೆಚ್ಚದಲ್ಲಿ ಚಿಕ್ಕಬಳ್ಳಾಪುರ ಮತ್ತು ಹುಬ್ಬಳ್ಳಿಯೆಲ್ಲಿನ ಮೆಡಿಕಲ್‌ ಕಾಲೇಜುಗಳಿಗೆ ಎಂಆರ್‌ಐ ಯಂತ್ರಗಳನ್ನು ಖರೀದಿಸಲು ಅನುಮತಿ.
* 56 ಕೋಟಿ ರೂ. ವೆಚ್ಚದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಕೈವಾರ ಪಿಹೆಚ್‌ಸಿ ಹಾಗೂ ಮಂಚೇನಹಳ್ಳಿಯ ಆಸ್ಪತ್ರೆಗಳನ್ನು ಉನ್ನತೀಕರಿಸಲು ಹಾಗೂ ಹೆಚ್ಚುವರಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ತೀರ್ಮಾನ.
* ಕೋಲಾರದ ಬಾಲಕ ಹಾಗೂ ಬಾಲಕಿಯರ ಕಾಲೇಜಿನ ಅವಶ್ಯಕ ಮೂಲ ಸೌಕರ್ಯಗಳ ಕಾಮಗಾರಿಗಳನ್ನು ಕ್ರಮವಾಗಿ 40 ಕೋಟಿ ಮತ್ತು 20 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲು ನಿರ್ಧಾರ.
* ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ 2ನೇ ಹಂತದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು 123 ಕೋಟಿ ರೂ. ಅಂದಾಜು ಮೊತ್ತಕ್ಕೆ ಆಡಳಿತಾತ್ಮಕ ಅನುಮೋದನೆ.
* ನಬಾರ್ಡ್ ಸಾಲದ ನೆರವಿನೊಂದಿಗೆ 10 ಕೋಟಿ ರೂ. ವೆಚ್ಚದಲ್ಲಿ ಅಂತಾರಾಷ್ಟ್ರೀಯ ಪುಷ್ಪ ಹರಾಜು ಬೆಂಗಳೂರು (IFAB) ನಿಯಮಿತ ಸಂಸ್ಥೆಯನ್ನು ಬಲಪಡಿಸುವ ಯೋಜನೆಗೆ ಆಡಳಿತಾತ್ಮಕ ಅನುಮೋದನೆ
* ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಭಕ್ತರಹಳ್ಳಿ ಅರಸೀಕೆರೆಯ ಕೆಳಭಾಗದಲ್ಲಿ ಹೊಸ ಕೆರೆ ನಿರ್ಮಾಣ ಕಾಮಗಾರಿಯನ್ನು 36 ಕೋಟಿ ರೂ. ವೆಚ್ಚದಲ್ಲಿ ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ.
* ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಗೋಸಿಕೆರೆ ಗ್ರಾಮದ ಸಮೀಪ ವೇದಾವತಿ ನದಿಗೆ ಅಡ್ಡಲಾಗಿ ಬ್ರಿಡ್ಜ್‌ ಕಂ ಬ್ಯಾರೇಜ್ ನಿರ್ಮಾಣ ಕಾಮಗಾರಿಯನ್ನು 34 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಕೈಗೆತ್ತಿಕೊಳ್ಳಲು ಆಡಳಿತಾತ್ಮಕ ಅನುಮೋದನೆ.
* ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಪಟ್ಟಣದ ಭದ್ರಾ ನದಿಯ ಎಡ ಮತ್ತು ಬಲ ದಂಡೆಗಳಲ್ಲಿ ಪ್ರವಾಹ ಪೀಡಿತ ಪ್ರದೇಶಗಳನ್ನು ರಕ್ಷಿಸಲು ತಡೆಗೋಡೆ ನಿರ್ಮಾಣಕ್ಕೆ 50 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲು ಆಡಳಿತಾತ್ಮಕ ಅನುಮೋದನೆ.
* ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಭದ್ರಾ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣ ಮತ್ತು ದೊಣಬಘಟ್ಟ, ಕಾಗೆಕೊಡಮಗ್ಗೆ, ಹೊಳೆಹೊನ್ನೂರು – ಭದ್ರಾವತಿ ಮುಖ್ಯ ರಸ್ತೆಯ ನಡುವೆ ಸಂಪರ್ಕ ರಸ್ತೆ ಸುಧಾರಣೆ ಕಾಮಗಾರಿಯನ್ನು 35 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಕೈಗೆತ್ತಿಕೊಳ್ಳಲು ಆಡಳಿತಾತ್ಮಕ ಅನುಮೋದನೆ.
* ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಯಡಗೊಪ್ಪ ಗ್ರಾಮದ ಹತ್ತಿರ ದಂಡಾವತಿ ನದಿಗೆ ಅಡ್ಡಲಾಗಿ ಬ್ಯಾರೇಜ್ ನಿರ್ಮಿಸಿ ಸುಮಾರು 15 ಕೆರೆಗಳನ್ನು ತುಂಬಿಸುಔ 38 ಕೋಟಿ ರೂ. ವೆಚ್ಚದ ಯೋಜನೆಗೆ ಅಡಳಿತಾತ್ಮಕ ಅನುಮೋದನೆ.
* ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ದಂಡಾವತಿ ಮತ್ತು ವರದಾ ನದಿಗೆ ಅಡ್ಡಲಾಗಿ ಬ್ರಿಡ್ಜ್‌ ಕಂ ಬ್ಯಾರೇಜ್‌ಗಳನ್ನು ನಿರ್ಮಿಸುವ 54.70 ಕೋಟಿ ರೂ. ವೆಚ್ಚದ ಯೋಜನೆಗೆ ಆಡಳಿತಾತ್ಮಕ ಅನುಮೋದನೆ.
* ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನಲ್ಲಿ ತುಂಗಾಭದ್ರಾ ನದಿಯಿಂದ ನೀರೆತ್ತಿ ಚನ್ನಗಿರಿ ತಾಲೂಕಿನ 41 ಕೆರೆಗಳನ್ನು ತುಂಬಿಸುವ 365 ಕೋಟಿ ರೂ. ವೆಚ್ಚದ ಯೋಜನೆಯಡಿ ಮೊದಲ ಹಂತದಲ್ಲಿ 100 ಕೋಟಿ ಮೊತ್ತದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ನಿರ್ಧಾರ ಸೇರಿದಂತೆ ಹಲವು ನಿರ್ಣಯಗಳನ್ನು ಇಂದಿನ ಸಭೆಯಲ್ಲಿ ಕೈಗೊಳ್ಳಲಾಯಿತು.