ಇನ್ಮುಂದೆ ರಾಜಧಾನಿಗೆ `ಬ್ರ್ಯಾಂಡ್ ಬೆಂಗಳೂರು’ ಪಟ್ಟ

ಬೆಂಗಳೂರು: ಇನ್ನು ಮುಂದೆ ಸಿಲಿಕಾನ್ ಸಿಟಿ ಬ್ರ್ಯಾಂಡ್ ಬೆಂಗಳೂರು ಆಗಲಿದೆ. ಬೆಂಗಳೂರಿಗಾಗಿ ವಿಶೇಷ ಲಾಂಛನ ಬಿಡುಗಡೆ ಮಾಡೋದಕ್ಕೆ ಕ್ಷಣಗಣನೆ ಆರಂಭವಾಗಿದ್ದು, ವಿಧಾನಸೌಧದ ಮುಂಭಾಗದಲ್ಲಿ ಕಾರ್ಯಕ್ರಮ ನಡೆಯುತ್ತಿದೆ. ಇಂದು ಬೆಳಗ್ಗೆ ಬ್ರ್ಯಾಂಡ್ ಬೆಂಗಳೂರು ಲೋಗೋವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅನಾವರಣ ಮಾಡಿದ್ದಾರೆ.

ಬ್ರ್ಯಾಂಡ್ ಬೆಂಗಳೂರು ದೇಶದಲ್ಲೇ ಮೊದಲ ಬಾರಿಗೆ ನಡೆಯುತ್ತಿರುವ ಪ್ರಯತ್ನವಾಗಿದ್ದು, ಪ್ರವಾಸೋದ್ಯಮ ಇಲಾಖೆ ವತಿಯಿಂದ ವಿಶಿಷ್ಟ ಕಾರ್ಯಕ್ರಮ ನಡೆಯುತ್ತಿದೆ. ನ್ಯೂಯಾರ್ಕ್, ಲಂಡನ್, ಮೆಲ್ಬರ್ನ್ ಮಾದರಿಯಲ್ಲಿ ಬೆಂಗಳೂರಿಗೂ ವಿಶೇಷ ಲಾಂಛನ ನೀಡಲಾಗುತ್ತಿದೆ.

ಈ ಪ್ರಯುಕ್ತ ರಾತ್ರಿ 9 ಗಂಟೆವರೆಗೂ ಕಾರ್ಯಕ್ರಮ ನಡೆಯಲಿದ್ದು, ವಿಧಾನ ಸೌಧ ರಸ್ತೆ ಓಪನ್ ಸ್ಟ್ರೀಟ್ ಆಗಿ ಪರಿವರ್ತನೆಗೊಂಡಿದೆ. ಪುಡ್ ಕೋರ್ಟ್, ಮ್ಯೂಸಿಕ್ ಮತ್ತು ಡ್ಯಾನ್ಸ್ ಕಾರ್ಯಕ್ರಮಗಳ ಆಯೋಜನೆಯಾಗಿದ್ದು, ನೂರಕ್ಕೂ ಹೆಚ್ಚು ಸ್ಟಾಲ್‍ಗಳು ನಿರ್ಮಾಣಗೊಂಡಿವೆ. ಅಷ್ಟೇ ಅಲ್ಲದೇ ವಿವಿಧ ಜನಪದ ಕಲಾ ತಂಡಗಳು ತಮ್ಮ ನೃತ್ಯಗಳ ಮೂಲಕ ಕಾರ್ಯಕ್ರಮಕ್ಕೆ ಸೊಬಗು ನೀಡಿವೆ.

ಕಾರ್ಯಕ್ರಮದ ಪ್ರಯುಕ್ತ ವಿಧಾನಸೌಧದ ಮುಂದೆ ವಾಹನ ಸಂಚಾರ ನಿರ್ಬಂಧಿಸಲಾಗಿದ್ದು, ವಿಧಾನಸೌಧ ಮುಂದೆ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ. ಭದ್ರತೆಗಾಗಿ ಡ್ರೋನ್ ಕ್ಯಾಮರಾವನ್ನು ಬಳಸಲಾಗುತ್ತಿದೆ.

 

 

Comments

Leave a Reply

Your email address will not be published. Required fields are marked *